

ಮೈಸೂರು: ಸಕಾಲದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸದ ಪರಿಣಾಮ ಶಿಕ್ಷಕ ವೃತ್ತಿ ಸೇರಬೇಕು ಎನ್ನುವ ಪದವೀಧರರಿಗೆ ಅನ್ಯಾಯವಾಗುತ್ತಿದೆ ಎಂದು ವಿಧಾನಪರಿಷತ್ತಿನ ಸದಸ್ಯ ಕೆ.ವಿವೇಕಾನಂದ ಬೇಸರ ವ್ಯಕ್ತಪಡಿಸಿದರು.
ಎಸ್‌ಜೆಸಿಇ ಆವರಣದ ಜೆಎಸ್‌ಎಸ್ ಪಾಲಿಟೆಕ್ನಿಕ್‌ನಲ್ಲಿ ಬುಧವಾರ ಆಯೋಜಿಸಿದ್ದ 3ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ 2024-25ನೇ ಸಾಲಿನ ಪದವೀಧರ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ನಾಲ್ಕೈದು ಪದವಿಗಳನ್ನು ಪಡೆದು ಸರ್ಕಾರಿ ಶಿಕ್ಷಕ ವೃತ್ತಿಗೆ ಕಾಯುತ್ತಿರುವ ಪದವೀಧರರಿಗೆ ಸಕಾಲದಲ್ಲಿ ನೇಮಕ ಪಕ್ರಿಯೆ ನಡೆಯದೆ ಇರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕೇವಲ 12,500 ರೂ.ಗೆ ವೇತನ ಪಡೆಯುವ ಮೂಲಕ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುವಂತೆ ಆಗಿದೆ ಎಂದರು.
ಸಕಾಲದಲ್ಲಿ ರಾಜ್ಯ ಸರ್ಕಾರ ಹುದ್ದೆಗೆ ನೇಮಕ ಮಾಡಿಕೊಳ್ಳದೆ ಶಿಕ್ಷಕ ವರ್ಗಕ್ಕೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ 1.5 ಲಕ್ಷ ಶಿಕ್ಷಕರ ಹುದ್ದೆಗಳು ಖಾಲಿ ಇದೆ. ಅರ್ಹ ಶಿಕ್ಷಕರು ಇದ್ದರೂ ಕಳೆದ ಎರಡು ದಶಕಗಳಿಂದ ನೇಮಕ ಮಾಡದೆ ನಿರ್ಲಕ್ಷ್ಯವಹಿಸಿದೆ ಎಂದು ಹೇಳಿದರು.
ಅರ್ಹ ಶಿಕ್ಷಕರು ಕಡಿಮೆ ವೇತನಕ್ಕೆ ಒತ್ತಡದಲ್ಲಿ ಕೆಲಸ ಮಾಡುವಂತೆ ಆಗಿದೆ. ಶೀಘ್ರದಲ್ಲಿಯೇ ಸರ್ಕಾರ ಶಿಕ್ಷಕರ ನೇಮಕ ಮಾಡುವಂತೆ ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ದನಿ ಎತ್ತುವ ಮೂಲಕ ಶಿಕ್ಷಕ ಸಮುದಾಯದ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗೆ ಆದ್ಯತೆ ನೀಡುವ ಮೊದಲು ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರದಿಂದ ಸಮಾಜದ ಏಳಿಕೆ ಸಾಧ್ಯ ಎಂದು ಹೇಳಿದರು.
ಡಿಪ್ಲೊಮಾದಲ್ಲಿ ಪಡೆದ ಕೌಶಲ್ಯ ಮತ್ತು ಜ್ಞಾನವನ್ನು ಯಶಸ್ವಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಮಾತ್ರವಲ್ಲದೆ, ನಮ್ಮ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಮೈಸೂರು ಇನ್ಫೋಸಿಸ್ ಲಿಮಿಟೆಡ್‌ನ ಅಡ್ವಾನ್ಸ್ಡ್ ಟೆಕ್ನಾಲಜಿ ವಿಭಾಗದ ಶ್ರೀಕಂಠಗುಪ್ತ ಮಾತನಾಡಿ, ಉದಯೋನ್ಮುಖ ತಂತ್ರಜ್ಞಾನಗಳೊಂದಿಗೆ ನಾವು ಸದಾ ನವೀಕೃತಗೊಳ್ಳುತ್ತಿರಬೇಕು. ಬದಲಾವಣೆಗಳಿಗೆ ಹೊಂದಿಕೊಳ್ಳುವ, ಹೊಸ ಕೌಶಲಗಳನ್ನು ಕಲಿಯುವ ಮತ್ತು ಸಹಯೋಗದೊಂದಿಗೆ ಕೆಲಸ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.
ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ತೋರಿದ 8 ಪ್ರಥಮ ರ‌್ಯಾಂಕ್ ಮತ್ತು 9 ದ್ವಿತೀಯ ರ‌್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು. ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಕೆ.ಎಸ್.ಭಕ್ತವತ್ಸಲ, ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಎಚ್.ಎನ್. ರವಿ, ಜೆಎಸ್‌ಎಸ್ ಮಹಿಳಾ ಪಾಲಿಟೆಕ್ನಿಕ್ ಪ್ರಾಂಶುಪಾಲ ವಿ.ಬಿ. ಲೋಕೇಶ್ ಇದ್ದರು.