

ಹುಣಸೂರು: ತಾಲೂಕಿನಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮರದೂರು ಏತ ನೀರಾವರಿ ಯೋಜನೆ ವ್ಯಾಪ್ತಿಯ ಸೋಮನಹಳ್ಳಿ ಗ್ರಾಮದ ಎರಡು ಕೆರೆಗಳನ್ನು ಕಳೆದ ಎರಡು ವರ್ಷಗಳಿಂದ ತುಂಬಿಸದೆ ರೈತರಿಗೆ ಅನ್ಯಾಯವೆಸಗಲಾಗಿದೆ ಎಂದು ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಆರೋಪಿಸಿದ್ದಾರೆ.
ಸೋಮನಹಳ್ಳಿ ಗ್ರಾಮದ ಬಸವನಕೆರೆ 10 ಎಕರೆ ವಿಸ್ತೀರ್ಣ ಹಾಗೂ ಹೊಸಕೆರೆ 14 ಎಕರೆ ವಿಸ್ತೀರ್ಣವಿದ್ದು, ಈ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮೊದಲನೇ ಹಂತವಾಗಿ 30 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿತ್ತು. ಈ ಕಾಮಗಾರಿಯೂ ಕಳಪೆಯಿಂದ ಕೂಡಿದ್ದ ಕಾರಣ ಕೆರೆಗೆ ತುಂಬಿಸಲಾಗಲಿಲ್ಲ. ಪುನಾ ಎರಡನೇ ಹಂತವಾಗಿ 9 ಇಂಚುಗಳ ಪೈಪುಗಳನ್ನು ಅಳವಡಿಸಲು ಸಣ್ಣ ನೀರಾವರಿ ಇಲಾಖೆ 25 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ಕೆರೆಗಳಿಗೆ ನೀರು ತುಂಬಿಸುವುದು ಮರೀಚಿಕೆ ಎಂಬಂತಾಗಿದೆ. ಇದೀಗ ಕೊಡಗು ಭಾಗದಲ್ಲಿ ಭರ್ಜರಿ ಮಳೆಯಾಗುತ್ತಿದೆ. ಆದರೆ, ಸಣ್ಣ ನೀರಾವರಿ ಇಲಾಖೆ ಮಾತ್ರ ಈ ಕೆರೆಗಳ ಕುರಿತು ಕಣ್ಣಿದ್ದು ಕುರುಡು ಎಂಬಂತೆ ವರ್ತಿಸುತ್ತಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮರದೂರು ಏತ ನೀರಾವರಿ ಯೋಜನೆಯ ಮೂಲಕ ಈ ಕೆರೆಗಳನ್ನು ತುಂಬಿಸಬೇಕು. ಇಲ್ಲದಿದ್ದಲ್ಲಿ ರೈತರೊಡಗೂಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.