ಶಾಸಕರಿಂದ ರೈತರಿಗೆ ಅನ್ಯಾಯ

07bhr 2 jagadish
Published on

ಬಾಳೆಹೊನ್ನೂರು: ಸರ್ಕಾರದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ರಹಸ್ಯವಾಗಿ ಬೆಂಬಲಿಸುತ್ತಿರುವ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರಿಂದ ಮಲೆನಾಡಿನ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಎನ್.ಆರ್.ಪುರ ತಾಲೂಕು ಬಿಜೆಪಿ ವಕ್ತಾರ ಬಿ.ಜಗದೀಶ್ಚಂದ್ರ ಹೇಳಿದ್ದಾರೆ.
ರೈತ ವಿರೋಧಿ ನೀತಿ ಅನುಸರಿಸುತ್ತಿರುವ ರಾಜೇಗೌಡರು ಒತ್ತುವರಿ ತೆರವು ವಿಚಾರದಲ್ಲಿ ರಾಜಕೀಯ ಲಾಭ ನಷ್ಟಗಳನ್ನು ಲೆಕ್ಕ ಹಾಕುತ್ತಿರುವುದು ಮಲೆನಾಡ ರೈತರಿಗೆ ಮಾಡಿರುವ ಅನ್ಯಾಯವಾಗಿದೆ ಈ ಹಿನ್ನೆಲೆಯಲ್ಲಿ ಶಾಸಕರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಹಾಲಿ ಸರ್ಕಾರದ ನಿಲುವುಗಳು ಮಲೆನಾಡಿಗೆ ಮಾರಕವಾಗುವ ಜತೆಗೆ ಶಾಸಕರ ಬೆಂಬಲವಿದೆ ಎಂಬುವುದು ಇತ್ತೀಚೆಗೆ ಅವರದೇ ಪಕ್ಷದ ಅರಣ್ಯ ಸಚಿವರು ಸುದ್ದಿಗೋಷ್ಠಿ ನಡೆಸಿದಾಗ ಹೇಳಿರುವುದು ಒತ್ತುವರಿ ತೆರವು ವಿಚಾರದಲ್ಲಿ ಶಾಸಕರ ನಿಲುವು ರೈತರಿಗೆ ಸ್ವಷ್ಟವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ಈಗಾಗಲೇ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಳಿವು ಉಳಿವಿನ ಪ್ರಶ್ನೆಯಾಗಿರುವುದರಿಂದ ಸಣ್ಣ, ಮಧ್ಯಮ ವರ್ಗದ ರೈತರು, ರೈತ ಹೋರಾಟಗಳನ್ನು ರೂಪಿಸಿಕೊಂಡು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕರು ತಮ್ಮ ಹಿಂಬಾಲಕರ ಮೂಲಕ ಬದಲಿ ವೇದಿಕೆಗಳನ್ನು ಸೃಷ್ಟಿಸಿ ಹೋರಾಟದ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಮಲೆನಾಡಿನ ರೈತರಿಗೆ ಮಾಡುತ್ತಿರುವ ದ್ರೋಹ ಎಂದಿದ್ದಾರೆ.
ಶಾಸಕರು ಇನ್ನಾದರೂ ಎಚ್ಚರಗೊಳ್ಳಬೇಕಿದ್ದು, ಕೇವಲ ತೋರ್ಪಡಿಕೆಗೆ ರೈತರನ್ನು ಬೆಂಬಲಿಸಿ ಮೊಸಳೆ ಕಣ್ಣೀರು ಹಾಕುವ ಬದಲು ರೈತರಿಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ಕಂಡಕಂಡಲ್ಲಿ ರೈತರ ಬಗ್ಗೆ ಮತ್ತು ರೈತ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಶಾಸಕರು ನಿಲ್ಲಿಸಬೇಕಿದೆ. ಈ ಪ್ರವೃತ್ತಿ ಶಾಸಕರು ಬಿಡದಿದ್ದಲ್ಲಿ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net