ಕಾಂಗ್ರೆಸ್‌ನಿಂದ ದಲಿತರಿಗೆ ಅನ್ಯಾಯ

h14-Bhim Samavesh 1
Published on

ಹುಬ್ಬಳ್ಳಿ: ಕಾಂಗ್ರೆಸ್ ದಲಿತ ವಿರೋಧಿ ಪಕ್ಷ. ಸ್ವಾತಂತ್ರ್ಯ ನಂತರ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಯಾವುದೇ ಕ್ಷೇತ್ರದಲ್ಲಿ ಅವಕಾಶ ದೊರೆಯದಂತೆ ಮಾಡಿದೆ ಅದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಬಲವರ್ಧನೆಗಾಗಿ ಭೀಮ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಈ ಮೂಲಕ ಭಾರತ ವಿಕಸಿತ ಆಗಬೇಕು ಎಂಬ ಏಕೈಕ ಕಲ್ಪನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದ್ದಾಗಿ ಎಂದರು.
ಕಾಂಗ್ರೆಸ್‌ನವರು ಯಾರಿಗೂ ಒಳ್ಳೆಯದು ಮಾಡಿಲ್ಲ. ದೇಶಕ್ಕೆ ಪವಿತ್ರವಾದ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಬದುಕಿದಾಗ ಚಿತ್ರಹಿಂಸೆ ನೀಡಿದರು ಎಂದು ದೂರಿದರು.
ಡಾ. ಬಿ.ಆರ್. ಅಂಬೇಡ್ಕರ್ ವಿಧಾನ ಸಭೆ ಹಾಗೂ ಲೋಕಸಭೆಗೆ ಬರಬಾರದು ಎಂದು ಕಾಂಗ್ರೆಸ್ ಅಂದು ಪಿತೂರಿ ಮಾಡಿತ್ತು. ದಲಿತರಿಗೆ ಭೂಮಿ ಕೊಡುವುದಕ್ಕೆ ವಿರೋಧಿಸಿದ್ದರು. ಸಂವಿಧಾನ ರಚನೆ ಮಾಡಿದ ವ್ಯಕ್ತಿಗೆ ಜೀವನಪರ್ಯಂತ ಕಷ್ಟ ನೀಡಿ ಇಂದು ಸಂವಿಧಾನ ಉಳಿಸಿ ಎಂದು ಬೊಬ್ಬೆ ಹೊಡೆಯುತ್ತಿರುವವರು ಕಾಂಗ್ರೆಸ್ಸಿಗರು. ಈ ವಿಚಾರಗಳು ಜನರ ಮಧ್ಯೆ ಹೋಗಬೇಕು. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿರುವ ಅನ್ಯಾಯ ಸಂಗತಿಗಳು ಜನರಿಗೆ ತಲುಪಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಕ್ಕೆ ಇಳಿಯಲಿದೆ. ಐಎನ್‌ಡಿಐಎ ಒಕ್ಕೂಟ ಛಿದ್ರವಾಗಿದೆ. ರಾಜ್ಯದ ಜನರು ಸಹ ಕಾಂಗ್ರೆಸ್‌ನವರನ್ನು ಮನೆಗೆ ಕಳುಹಿಸಬೇಕು. ದೇಶ ಅಭಿವೃದ್ಧಿಗೆ ಪ್ರಧಾನಿ ಮೋದಿ ಅವರನ್ನು ಗೆಲ್ಲಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್‌ನಂತೆ ಬಿಜೆಪಿ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ರಾಜಕಾರಣಕ್ಕಾಗಿ ಕಾಂಗ್ರೆಸ್‌ನವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಮುಚ್ಚಿಟ್ಟು ಅವಮಾನ ಮಾಡಿದ್ದರು. ಈಗ ಮತ್ತೆ ಮತ ಬ್ಯಾಂಕ್‌ಗಾಗಿ ಅಂಬೇಡ್ಕರ್ ಗೌರವಿಸುವ ನಾಟಕ ಮಾಡುತ್ತಿದ್ದಾರೆ ಎಂದರು.
ಶಾಸಕ ಸಿಮೆಂಟ್ ಮಂಜು, ಸಂಸದ ಎಸ್. ಮುನಿಸ್ವಾಮಿ ಮಾತನಾಡಿದರು.
ಬಿಜೆಪಿ ರಾಜ್ಯ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ರಾಜು ಕೊಟ್ಟೆಣ್ಣವರ, ತಿಪ್ಪಣ್ಣ ಮಜ್ಜಗಿ, ಡಾ. ಕ್ರಾಂತಿಕಿರಣ, ಭಾರ್ಗವಿ ದ್ರಾವಿಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net