

ಹುಬ್ಬಳ್ಳಿ: ದಲಿತ ನಾಯಕರಾದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಜಗಜೀವನರಾಂ ಸೇರಿದಂತೆ ಹಲವು ನಾಯಕರನ್ನು ಕಾಂಗ್ರೆಸ್ ಮುಂದುವರಿಯಲು ಬಿಡಲಿಲ್ಲ. ದೇಶದಲ್ಲಿ ವಂಶವಾದದ ಆಡಳಿತ ಇರುವವರೆಗೆ ಜನರಿಗೆ ಒಳ್ಳೆಯದು ಆಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮಾದಿಗರ ಆತ್ಮಗೌರವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಜವಾಹರ ಲಾಲ್ ನೆಹರು ಅವರು ಅಂಬೇಡ್ಕರ್ಗೆ ಅನ್ಯಾಯ ಮಾಡಿದರು. ಅಂಬೇಡ್ಕರ್ ಸೋಲಿಸಿದವರಿಗೆ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು. ಆದರೆ, ಅಂಬೇಡ್ಕರ್ಗೆ ಭಾರತ ರತ್ನ ಪ್ರಶಸ್ತಿ ಕೊಡಲು ಬಹಳಷ್ಟು ಸಮಯ ತೆಗೆದುಕೊಂಡರು. ಜಗಜೀವನರಾಂ ಅವರನ್ನು ಪ್ರಧಾನಿಯನ್ನಾಗಿ ಮಾಡಲಿಲ್ಲ ಎಂದು ದೂಷಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ನಾಮ್ೇವಾಸ್ತೆ. ಈಗ ಅವರು ಪ್ರಧಾನಿಯಾಗಲಿ ಎಂದು ಇಂಡಿಯಾ ಒಕ್ಕೂಟ ಹೇಳಿದರೆ, ಸಿದ್ದರಾಮಯ್ಯ ರಾಹುಲ್ಗಾಂಧಿ ಆಗಲಿ ಎನ್ನುತ್ತಿದ್ದಾರೆ. ಕಾಂಗ್ರೆಸ್ನಲ್ಲಿಯೇ ಒಗ್ಗಟ್ಟಿಲ್ಲ. ಬಿಜೆಪಿಯಿಂದ ಮಾತ್ರ ಎಲ್ಲರ ಹಿತ ಕಾಪಾಡಲು ಸಾಧ್ಯ ಎಂದರು.
ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಒಳ ಮೀಸಲಾತಿ ವಿಷಯವಾಗಿ ಕಾಂಗ್ರೆಸ್ ಗೊಂದಲ ಸೃಷ್ಟಿ ಮಾಡಿದೆ. ನ್ಯಾ.ಸದಾಶಿವ ಆಯೋಗ ರಚನೆಯಾದರೂ ಅನುದಾನ ನೀಡಿರಲಿಲ್ಲ. ಬಿಜೆಪಿ ಸರ್ಕಾರ ಬಂದಾಗ 11 ಕೋಟಿ ರೂ. ಅನುದಾನ ಕೊಡಲಾಯಿತು. ಒಳ ಮೀಸಲಾತಿ ಹಂಚಿಕೆ ಮಾಡಿದ್ದನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ನ್ಯಾಯ ಕೊಟ್ಟೆ ಕೊಡುತ್ತಾರೆ ಎನ್ನುವ ನಂಬಿಕೆ ಇದೆ. ಕೆಲವೇ ದಿನಗಳಲ್ಲಿ ಆದೇಶವೂ ಬರಬಹುದು ಎಂದರು.
ಕಾಂಗ್ರೆಸ್ನವರು ಅಂಬೇಡ್ಕರ್, ಬಾಬೂಜಿ ಅವರಿಗೆ ಅನ್ಯಾಯ ಮಾಡಿದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಯಾರೂ ಬೇಡವೆಂದ ಜಾಗಕ್ಕೆ ಇವರನ್ನು ತಂದು ಕೂಡಿಸಿದ್ದಾರೆ. ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ತಂದಿದ್ದಾರೆ. ಖರ್ಗೆ ಪ್ರಧಾನಿಯಾಗಲಿ ಎಂದು ಇಂಡಿಯಾ ಒಕ್ಕೂಟ ಹೇಳಿದರೆ, ಸೋನಿಯಾ, ರಾಹುಲ್ ಗಾಂಧಿ ಚಪ್ಪಾಳೆ ಹೊಡೆಯಿಲ್ಲ. ದಲಿತರಿಗೆ ಆ ಪಕ್ಷದಲ್ಲಿ ಗೌರವ ಇಲ್ಲ ಎಂದರು.
ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಮಾತನಾಡಿ, ಬಿಜೆಪಿಯಿಂದ ಎಲ್ಲ ಸಮಾಜದವರಿಗೂ ನ್ಯಾಯ ಸಿಗಲಿದೆ. ಕಾಂಗ್ರೆಸ್ನವರು ಇದುವರೆಗೆ ಭರವಸೆ ನೀಡಿ, ಶೋಷಿತರನ್ನು ದೂರವಿಟ್ಟಿದೆ. ಇದನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು. ಆದಿ ಜಾಂಬವ ಗುರುಪೀಠದ ಶ್ರೀ ಮುನಿರತ್ನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕರಾದ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಪ್ರಮುಖರಾದ ಬಿ.ಆರ್. ಮುನಿರಾಜು, ಸಿದ್ದು ಮೇತ್ರಿ, ಸಾಧು ದೊಡ್ಡಮನಿ, ಸಹದೇವ ಮಾಳಗಿ, ವಿಜಯ ಗುಂಟ್ರಾಳ, ನರಸಪ್ಪ ದಂಡೋರ, ಮಂಜುನಾಥ ಕೆ. ಇತರರಿದ್ದರು.
ಗೊಂದಲದ ಗೂಡಾದ ಸಭೆ: ಈರಣ್ಣ ಮೌರ್ಯ ಅವರು ಕಾಂಗ್ರೆಸ್ ಸರ್ಕಾರ ದಲಿತರಿಗೆ ಮಾಡಿದ ಅನ್ಯಾಯ ಕುರಿತು ಪಿಪಿಟಿ ಮೂಲಕ ವಿವರಿಸುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಮಾತನಾಡಿದ ವಿಡಿಯೋ ತುಣುಕು ಹಾಕಲು ಸೂಚಿಸಿದರು. ಆಗ ವೇದಿಕೆ ಮೇಲಿದ್ದ ವೆಂಕಟೇಶ ಸಕ್ಬಾಲ್ವುತ್ತು ಅಶೋಕ ದೊಡ್ಡಮನಿ ಅವರು ‘ವಿಡಿಯೋ ಬೇಡ’ ಎಂದು ಪಟ್ಟು ಹಿಡಿದರಲ್ಲದೆ, ಈಗ ಏನಾಗಬೇಕೆಂಬುದನ್ನು ಹೇಳಿ ಎಂದು ತಗಾದೆ ತೆಗೆದರು. ಇದರಿಂದ ಕೆಲಹೊತ್ತು ಗೊಂದಲದ ವಾತಾವರಣ ನಿರ್ವಣವಾಯಿತು. ವೇದಿಕೆಯಿಂದ ಕೆಳಗೆ ಇಳಿದ ಇಬ್ಬರೂ ತಮ್ಮ ಸಹವರ್ತಿಗಳನ್ನು ಕರೆದುಕೊಂಡು ಹೊರ ನಡೆಯಲು ಮುಂದಾದಾಗ ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಅವರು ಅಲ್ಲಿಗೆ ತೆರಳಿ ವೇದಿಕೆಗೆ ಕರೆತಂದರು. ಆಗ ಗೋವಿಂದ ಕಾರಜೋಳ ಅವರ ಮುಂದಿದ್ದ ಡಯಾಸ್ ಕುಟ್ಟಿದ ವೆಂಕಟೇಶ ಅವರು, ನಮ್ಮದೇನು ತಪ್ಪಿದೆ? ಎಂದು ಪ್ರಶ್ನೆ ಮಾಡಿದರು. ಕಾರಜೋಳ ಅವರೂ ವೆಂಕಟೇಶ ಅವರನ್ನು ಸಮಾಧಾನಪಡಿಸಿದರು.
ಇದಕ್ಕೂ ಮೊದಲು ಮಾತನಾಡಿದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಇದು ನಮ್ಮದೇ ಸಮಾವೇಶ. ಗಂಭೀರ ಮತ್ತು ಮಹತ್ವದ ವಿಷಯವಿದೆ. ಭಾವನೆಗಳನ್ನು ಹಂಚಿಕೊಳ್ಳೋಣ. ಆಕ್ರೋಶಕ್ಕೆ ಒಳಗಾಗದೆ ಸಭೆಯ ಶಿಸ್ತು ಕಾಪಾಡಬೇಕೆಂದು ಸಲಹೆಯಿತ್ತರು.