

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ದಿಗೆ ಹೊಸ ಅನುದಾನವನ್ನು ನೀಡುವುದರ ಹೊರತಾಗಿ ಬಿಡುಗಡೆಗೊಳಿಸಲಾಗಿದ್ದ ಕೋಟ್ಯಾಂತರ ರೂಪಾಯಿ ಅನುದಾನಗಳನ್ನೂ ಸಹ ರದ್ದುಪಡಿಸುವ ಆದೇಶ ಹೊರಡಿಸಿರುವುದು ಅತ್ಯಂತ ಖಂಡನೀಯ. ಕಾಂಗ್ರೆಸ್ ಸರ್ಕಾರದಿಂದ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ 1,000 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ವಿವಿಧ ನಿಗಮಗಳಿಗೆ ಬಿಡುಗಡೆ ಮಾಡಿತ್ತು. ಆದರೆ ಅದನ್ನೀಗ ಕಾಂಗ್ರೆಸ್ ಸರ್ಕಾರ ತಡೆಯಿಡಿದು ರದ್ದುಗೊಳಿಸಿದೆ. ಇದು ರಾಜ್ಯದಲ್ಲಿ ಹಿಂದುಳಿದ ವರ್ಗದವರನ್ನು ಮುನ್ನಲೆಗೆ ಬರಲು ಬಿಡದೇ ಹಿಂದುಳಿದವರಾಗಿಯೇ ಉಳಿಸುವ ಷಡ್ಯಂತ್ರವಾಗಿದ್ದು, ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅಹಿಂದ ವರ್ಗಕ್ಕೇ ಅನ್ಯಾಯ ಮಾಡುತ್ತಿರುವುದು ಎಷ್ಟು ಸರಿ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ಹೀಗೆ ಹತ್ತು ಹಲವು ನಿಗಮಗಳ ಮೂಲಕ ಸಾಂಪ್ರದಾಯಿಕ ನೇರ ಸಾಲ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಕಾಯಕ ಕಿರಣ, ಅರಿವು, ಹೊಲಿಗೆ ಯಂತ್ರ ಇಂತಹ ಹತ್ತು ಹಲವು ಯೋಜನೆಗಳ ಮೂಲಕ ಹಿಂದುಳಿದ ಸಮುದಾಯಗಳ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಿ ಸ್ವಾವಲಂಬಿ ಬದುಕಿಗಾಗಿ ನೆರವು ನೀಡಲಾಗುತ್ತಿತ್ತು. ಆದರೆ ಈಗಿನ ಸರಕಾರ ಅದರಲ್ಲೂ ಫಲಾನುಭವಿಗಳ ಸಂಖ್ಯೆಯನ್ನು ಕಡಿತ ಮಾಡಿ ಸಮುದಾಯಕ್ಕೆ ಅನ್ಯಾಯವೆಸಗುತ್ತಿದೆ ಎಂದರು.
ಈ ಹಿಂದೆ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ಎಂದು ಮಂಗಳೂರಿನಿಂದ ವಿಧಾನಸೌಧವರೆಗೆ ಪಾದಯಾತ್ರೆ ಮಾಡಿದ್ದವರು, ಈಗ ನಾರಾಯಣ ಗುರು ನಿಗಮಕ್ಕೆ ಈವರೆಗೆ ಅಧ್ಯಕ್ಷನೂ ನೇಮಕವಾಗಿಲ್ಲ, ಅನುದಾನವೂ ನೀಡಲಾಗಿಲ್ಲ, ಆದರೂ ಮೌನವಾಗಿದ್ದಾರೆ. ಬಂಟರ ನಿಗಮದ ಸ್ಥಿತಿಯೂ ಅದೇ ರೀತಿ ಇದ್ದು ಯಾವುದೇ ಸಕಾರಾತ್ಮಕ ಬೆಳವಣಿಗೆ ಇಲ್ಲ. ಕೂಡಲೇ ಈ ಅನ್ಯಾಯವನ್ನು ಸರಿಪಡಿಸಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಅನುದಾನಗಳ ಸಹಿತ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಮಂಗಳೂರು ಬಿಜೆಪಿ ಪ್ರಮುಖರಾದ ರಮೇಶ್ ಕಂಡೆಟ್ಟು, ಲಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಮಾಜಿ ಉಪಮೇಯರ್ ಭಾನುಮತಿ, ಪೂರ್ಣಿಮಾ, ಉಪಸ್ಥಿತರಿದ್ದರು.