ಆಗಸ್ಟ್‌ನಲ್ಲಿ ಕ್ರೀಡಾಕೂಟಗಳಿಂದ ಅನ್ಯಾಯ : ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ಅಧ್ಯಕ್ಷ ಪ್ರೊ.ಕಿಶೋರ್ ಅಭಿಪ್ರಾಯ

Ull_Kreedakoota
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳು ವಿಪರೀತ ಮಳೆ ಇರುವುದರಿಂದ ಕ್ರೀಡಾಕೂಟಕ್ಕೆ ಸಜ್ಜಾಗಲು ಸಮಯದ ಕೊರತೆ ಕಾಡುತ್ತದೆ. ಇಲಾಖೆ ಆಗಸ್ಟ್ ತಿಂಗಳಲ್ಲೇ ಕ್ರೀಡಾಕೂಟಗಳನ್ನು ಸಂಘಟಿಸಲು ಆದೇಶ ಮಾಡಿದರೆ ಕರಾವಳಿಯ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ಅಧ್ಯಕ್ಷ ಪ್ರೊ.ಕಿಶೋರ್ ಕುಮಾರ್ ಸಿ.ಕೆ. ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ವಾಮಂಜೂರು ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಕುಸ್ತಿ ಪಂದ್ಯಾಟವನ್ನು ಸೋಮವಾರ ಉದ್ಘಾಟಿಸಿ ವಾತನಾಡಿದರು.

ರಾಜ್ಯ, ರಾಷ್ಟ್ರಮಟ್ಟದ ಪಂದ್ಯಾಟಗಳಿಗೆ ಆಯ್ಕೆಯ ಸುತ್ತಿನ ಜತೆಗೆ ಪಂದ್ಯಾಟ ಸಂಘಟಿಸಲು ಡಿಸೆಂಬರ್ ತಿಂಗಳಿನವರೆಗೆ ಸಮಯಾವಕಾಶ ಕೊಟ್ಟರೆ ಉತ್ತಮ ಕ್ರೀಡಾಪಟುಗಳನ್ನು ಕಾಣಲು ಸಾಧ್ಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಲು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಕ್ರೀಡಾ ಚಟುವಟಿಕೆ, ತರಬೇತಿಗಳು ಉತ್ತಮವಾಗಿ ಸಿಗಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ದೈಹಿಕ ಶಿಕ್ಷಣ ಅಧಿಕಾರಿ ಭುವನೇಶ್ ಜಿ., ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂದ ಪ್ರಧಾನ ಕಾರ್ಯದರ್ಶಿ ಹರೀಶ್ ರೈ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂದ ಕಾರ್ಯದರ್ಶಿ ಮೋಹನ್ ಶಿರ್ಲಾಲ್, ಕುಸ್ತಿ ತರಬೇತುದಾರರಾದ ಮೋಹನ್ ಬೆಂಗ್ರೆ, ಸಂದೀಪ್ ಮೊದಲಾದವರಿದ್ದರು.

ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂ ಮೈಸೂರು ವಿಭಾಗೀಯ ಕಾರ್ಯಾಧ್ಯಕ್ಷ ತ್ಯಾಗಂ ಹರೇಕಳ ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯ್ಸ ಪ್ರಸ್ತಾವನೆಗೈದರು. ನೋಡಲ್ ಶಿಕ್ಷಕ ರಾಜೀವ್ ನಾಯಕ್ ನಿರೂಪಿಸಿದರು. ತಾಲೂಕು ಸಂದ ಅಧ್ಯಕ್ಷ ಶೇಖರ್ ಕಡ್ತಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net