

ವಿಜಯಪುರ: ನಾಡು-ನುಡಿ, ನೆಲ-ಜಲ ಹಾಗೂ ಗಡಿ ಸಂರಕ್ಷಣೆ ಸೇರಿದಂತೆ ಸಮಗ್ರ ಅಭಿವೃದ್ಧಿ ದೃಷ್ಠಿಕೋನದೊಂದಿಗೆ ಪ್ರಾದೇಶಿಕ ಪಕ್ಷ ಕಟ್ಟುವ ನಿಟ್ಟಿನಲ್ಲಿ ತಯಾರಿ ನಡೆದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ರಾಷ್ಟ್ರೀಯ ಪಕ್ಷಗಳಿಗೆ ಬದ್ಧತೆ ಇಲ್ಲ. ಕೇಂದ್ರ ಹಾಗೂ ರಾಜ್ಯ ಬಜೆಟ್‌ನಲ್ಲಿ ರೈತರಿಗೆ ನೀಡಿದ ಕೊಡುಗೆ ಶೂನ್ಯ. ಕಾರ್ಪೋರೇಟ್ ಕಂಪನಿಗಳ ಪರ ಆಡಳಿತ ನಡೆಸುವ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಅಭಿವೃದ್ಧಿ ಶೂನ್ಯ. ಹೀಗಾಗಿ ಸಣ್ಣ ಪುಟ್ಟ ಪಕ್ಷಗಳು, ಸಂಘಟನೆಗಳು ಒಂದೇ ಬ್ಯಾನರ್ ಅಡಿ ತಂದು 2028ರ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪ್ರಾದೇಶಿಕ ಪಕ್ಷ ಕಟ್ಟುವ ತಯಾರಿ ನಡೆದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ರಾಜ್ಯ ಹಾಗೂ ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಬಿಡಿಗಾಸಿನ ಲಾಭವೂ ಸಿಕ್ಕಿಲ್ಲ. ಉತ್ಪಾದನೆ, ಕೃಷಿ ಉಪಕರಣ ಹಾಗೂ ಮತ್ತಿತರ ಪರಿಕರಗಳನ್ನು ತಯಾರಿಸುವ ಕಂಪನಿಗೆ ಅನುಕೂಲ ಮಾಡಿಕೊಡಲಾಗಿದೆ ವಿನಃ ರೈತರಿಗೆ ಇಲ್ಲ. ಉತ್ಪಾದಕನನ್ನೇ ಕಡೆಗಣಿಸಲಾಗಿದೆ. ರೈತನ ಆರ್ಥಿಕತೆಗೆ ಉತ್ತೇಜನ ಸಿಕ್ಕಿಲ್ಲ. ರೈತನಿಗೂ ಬಜೆಟ್‌ಗೂ ಸಂಬಂಧವೇ ಇಲ್ಲ ಎಂದರು.
ಈ ಪಕ್ಷಗಳು ಟೀಕೆ ಟಿಪ್ಪಣೆಗಷ್ಟೇ ಸೀಮಿತವಾಗಿವೆ. ಅಧಿವೇಶನದಲ್ಲಿ ಸಿದ್ದರಾಮಯ್ಯ ಬಿಜೆಪಿ ಕುರಿತು ಆದಾನಿ- ಅಂಬಾನಿ ಪರ ಸರ್ಕಾರ ಎಂದು ಟೀಕಿಸುತ್ತಾರೆ. ಭಾರತ ಸರ್ಕಾರ 16.35 ಲಕ್ಷ ಕೋಟಿ ಸಾಲ ಕೈ ಬಿಡುವ ತೀರ್ಮಾನ ಕೈಗೊಳ್ಳುತ್ತಾರೆ. ಇದು ಯಾರಪ್ಪನ ಮನೆ ದುಡ್ಡು? ಎಂದ ಕೋಡಿಹಳ್ಳಿ, ಆಪ್ತ ಉದ್ದಿಮೆದಾರರ ಸಾಲ ಮನ್ನಾ ಮಾಡುವ ನೀವು ಯಾವ ಸೀಮೆ ರಾಜಕಾರಣಿಗಳು? ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಯೇ ಇವರ ಉದ್ದೇಶವಾಗಿದೆ. ಹೀಗಾಗಿ ಜನ ಇವರನ್ನು ಕ್ಷಮಿಸಬಾರದು. ಯಾರು ದೇಶ ಕಟ್ಟಲು ಬಂದಿಲ್ಲವೋ ಅವರ ವಿರುದ್ಧ ಧ್ವನಿ ಎತ್ತ ಬೇಕು ಎಂದರು.
ರಾಷ್ಟ್ರೀಯ ಪಕ್ಷಗಳಲ್ಲಿ ಸೇವೆ ಮಾಡಲು ಯಾರೂ ಬಂದಿಲ್ಲ. ಸೇವೆಯ ಅರ್ಥವೇ ಗೊತ್ತಿಲ್ಲದವರು ರಾಜಕಾರಣಕ್ಕೆ ಬಂದಿದ್ದಾರೆ. ಎಲ್ಲರೂ ಲೂಟಿಕೋರರೇ. ಕೇವಲ ಪಾಕಿಸ್ತಾನ, ಮುಸ್ಲಿಂರನ್ನು ತೋರಿಸಿ ಆಡಳಿತ ಮಾಡುವುದು ಪರಿಹಾರವಲ್ಲ. ಚೈನಾ, ಅಮೇರಿಕಾ, ಯುರೋಪ ರಾಷ್ಟ್ರ ತೋರಿಸಿ ಆಡಳಿತ ಮಾಡಿ. ಅದನ್ನು ಬಿಟ್ಟು ಯಾವುದೋ ಬಡ ರಾಷ್ಟ್ರ ತೋರಿಸಿ ಆಡಳಿತ ಮಾಡೋದು ಸರಿಯಲ್ಲ. ಜನಾಂಗೀಯ ನಿಂದನೆ ಸರಿಯಲ್ಲ. ಇಂಥ ರಾಷ್ಟ್ರೀಯ ಪಕ್ಷಗಳನ್ನು ಜನ ತಿರಸ್ಕರಿಸಬೇಕು ಎಂದ ಚಂದ್ರಶೇಖರ ಅವರು, ಈ ಹಿಂದೆ ಕಾಂಗ್ರೆಸ್ ಟೀಕಿಸುತ್ತಿದ್ದ ಸಿದ್ದರಾಮಯ್ಯ ಇಂದು ಅದೇ ಪಕ್ಷದ ಸಿಎಂ ಆಗಿದ್ದಾರೆ. ಬಿಜೆಪಿ ಮತ್ತು ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿದ್ದ ದೇವೇಗೌಡರು ಇಂದು ಮುಕ್ತವಾಗಿ ಅವರನ್ನೇ ಹೊಗಳುತ್ತಿದ್ದಾರೆ. ಎಲ್ಲಿದೆ ಜಾತ್ಯತೀತತೆ? ಇವರಿಗೆ ಯಾರಿಗೂ ಬದ್ಧತೆ ಇಲ್ಲ. ಹೀಗಾಗಿ ಪ್ರಬಲ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ ಎಂದರು.