

ಶಿವಮೊಗ್ಗ: ಒಳ ಮೀಸಲಾತಿ ಹಂಚಿಕೆ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಬಂಜಾರ ಸಮುದಾಯದವರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳ ಮೀಸಲಾತಿ ವರ್ಗೀಕರಣದ ವಿಚಾರದಲ್ಲಿ ದುರ್ಬಲ ವರ್ಗಗಳಿಗೆ ಅನ್ಯಾಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಾವನೂರು ವರದಿ, ಸದಾಶಿವ ವರದಿ, ಮಾಧುಸ್ವಾಮಿ ಸಮಿತಿ ಶಿಫಾರಸ್ಸು, ಕಾಂತರಾಜ ವರದಿ, ನಾಗಮೋಹನ ದಾಸ್ ವರದಿ ಎಲ್ಲವನ್ನೂ ಸರ್ಕಾರಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿಲ್ಲ. 150 ಕೋಟಿ ರೂ. ತೆರಿಗೆ ಹಣವನ್ನು ಖರ್ಚು ಮಾಡಿ ಕಾಂತರಾಜ ಆಯೋಗ ವರದಿ ನೀಡಿದರೂ ಅದನ್ನು ಜಾರಿಗೊಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವ್ಯಾಪಕ ಪ್ರತಿಭಟನೆ ಬಳಿಕ ಈಗ ಮತ್ತೆ 450 ಕೋಟಿ ರೂ. ವೆಚ್ಚದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಜಾತಿಗಣತಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ಕೂಡ ಮುಂದಿನ ತಿಂಗಳಿನಿಂದ ಜನಗಣತಿಗೆ ಆದೇಶ ನೀಡಿದೆ. ವಿಪರ್ಯಾಸ ಎಂದರೆ ಎಲ್ಲೋ ಒಂದು ಕಡೆ ಕಾಣದ ಕೈಗಳು ಲಂಬಾಣಿ ಜನಾಂಗವನ್ನು ಒಡೆಯುವ ಷಡ್ಯಂತ್ರ ಮಾಡುತ್ತಿವೆ ಎಂದರು.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಲಂಬಾಣಿ ತಾಂಡ ಅಭಿವೃದ್ಧಿ ನಿಗಮ ಸ್ಥಾಪಿಸಿ ನೂರಾರು ಕೋಟಿ ರೂ. ಅನುದಾನ ನೀಡಿ ಸರ್ಕಾರದ ಹಲವು ಪ್ರಮುಖ ಹುದ್ದೆಗಳನ್ನು ಈ ಸಮಾಜಕ್ಕೆ ನೀಡಿದ್ದರು. ಸೇವಾಲಾಲ್ ಜನ್ಮಸ್ಥಳ ಅಭಿವೃದ್ಧಿಪಡಿಸಿದ್ದರು. ಮುಂದಿನ ದಿನಗಳಲ್ಲಿ ಅಲ್ಲಿಗೆ ರೈಲು ಸೇವೆಯೂ ದೊರೆಯಲಿದೆ. ಛಾಯಗಢ ಅಭಿವೃದ್ಧಿಗೆ 450 ಕೋಟಿ ರೂ.ಗಳನ್ನು ಮೋದಿ ಸರ್ಕಾರ ನೀಡಿದೆ. ಸದಾಕಾಲ ಯಡಿಯೂರಪ್ಪ ಕುಟುಂಬ ಈ ಸಮುದಾಯದ ಜತೆಗಿದೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ, ಬಂಜಾರ ಸಮುದಾಯದ ಗುರುಗಳಾದ ಸೈನಾ ಭಗತ್ ಮಹಾರಾಜ್, ಕೆ.ಜೆ.ನಾಗೇಶ್ ನಾಯ್ಕ, ಬಸವರಾಜ್ ನಾಯ್ಕ, ನಾನ್ಯಾನಾಯ್ಕ, ಜಗದೀಶ್ ನಾಯ್ಕ, ನಾಗರಾಜ್ ನಾಯ್ಕ, ಗಂಗಾನಾಯ್ಕ, ರಮೇಶ್ ನಾಯ್ಕ, ಭದ್ರಾವತಿ ಹಾಗೂ ಶಿವಮೊಗ್ಗ ತಾಲೂಕಿನ 10ಕ್ಕೂ ಅಧಿಕ ತಾಂಡಾಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.