ಕೇರಳ ಸಮುದ್ರದಲ್ಲಿ ಕಂಟೇನರ್ ಹಡಗಿಗೆ ಬೆಂಕಿ ಗಾಯಾಳುಗಳಿಗೆ ಮಂಗಳೂರಿನಲ್ಲಿ ಚಿಕಿತ್ಸೆ

mng--10 June Coast guard
Published on

ಮಂಗಳೂರು: ಕೇರಳದ ಕೋಯಿಕ್ಕೋಡ್ ಬೇಪೂರ್ ಸಮೀಪ ಸಮುದ್ರದಲ್ಲಿ ಸಿಂಗಾಪುರದ ಕಂಟೈನರ್ ಹಡಗಿನಲ್ಲಿ ಸೋಮವಾರ ಉಂಟಾಗಿದ್ದ ಅಗ್ನಿ ಅನಾಹುತದಲ್ಲಿ 6 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. 12 ಮಂದಿ ಯಾವುದೇ ಗಾಯಗಳಿಲ್ಲದೆ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ.

ಹಡಗಿನಲ್ಲಿ ಒಟ್ಟು 22 ಮಂದಿ ಸಿಬ್ಬಂದಿಗಳಿದ್ದು, 18 ಮಂದಿಯನ್ನು ರಕ್ಷಿಸಲಾಗಿದೆ. ನಾಲ್ವರು ನಾಪತ್ತೆಯಾಗಿದ್ದಾರೆ. ರಕ್ಷಣೆ ಮಾಡಿದ ಎಲ್ಲರನ್ನೂ ಮಂಗಳೂರು ನವಮಂಗಳೂರು ಪ್ರಾಧಿಕಾರಕ್ಕೆ ಐಎನ್‌ಎಸ್ ಸೂರತ್ ಶಿಪ್‌ನಲ್ಲಿ ಕರೆ ತಂದು ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿಗೆ ಹೊಟೇಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಗಾಯಾಗಳುಗಳ ವಿವರ: ಚೀನಾದ ಲೂ ಯಾನ್ಲಿ ಹಾಗೂ ಇಂಡೋನೇಷ್ಯಾದ ಸೋನಿಟ್ಯೂರ್ ಹೆನೈ ಗಂಭೀರ ಗಾಯಗೊಂಡವರು. ಚೀನಾದ ಗ್ಸೂ ಫೆಬಾವೊ, ಗೌ ಲಿನ್ನಿಂಗ್, ಮಯನ್ಮಾರ್‌ನ ತೇನ್ ಥಾನ್ ಹಾಟ್ಯೆ, ಕಿಝ್ವ ಹಾಟೂ ಗಾಯಾಳುಗಳು. ತೈವಾನ್‌ನ ಯು ಬೊ ಫಾಂಗ್, ಮಯನ್ಮಾರ್‌ನ ಸಾನ್ ವಿನ್, ಇಂಡೋನೇಷ್ಯಾದ ಝೀನಲ್ ಅಬ್ಡಿನ್, ತೈವಾನ್‌ನ ಹಿಶ್ ಚಿಯಾ ವೆನ್ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.

ರಕ್ಷಣೆಗೊಳಗಾದವರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಸೋಮವಾರ ರಾತ್ರಿ 10.45ಕ್ಕೆ ಮಂಗಳೂರು ಎನ್‌ಎಂಪಿಎಗೆ ಕರೆ ತಂದರು. ಹಡಗಿನಲ್ಲಿ ಮಾಸ್ಟರ್, ಚೀಫ್ ಆಫೀಸರ್, ಇಂಜಿನಿಯರ್, ಕಾರ್ಪೆಂಟರ್, ಪಿಟ್ಟರ್, ಅಡುಗೆಯವರು, ಮೋಟಾರ್ ಮ್ಯಾನ್ ಮೊದಲಾದ ಸಿಬ್ಬಂದಿಗಳಿದ್ದರು. ಇವರು ತೈವಾನ್, ಚೀನಾ, ಮಯನ್ಮಾರ್, ಇಂಡೋನೇಷ್ಯಾ ದೇಶಗಳಿಗೆ ಸೇರಿದವರು.

ಅಗ್ನಿ ತಹಬಂದಿಗೆ: ಭಾರತೀಯ ನೌಕಾಪಡೆಯ ಐ.ಎನ್.ಎಸ್. ಸೂರತ್ ಹಾಗೂ ಇತರ ಮೂರು ನೌಕೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. ಕಂಟೈನರ್ ಹಡಗಿಗೆ ಹೊತ್ತಿಕೊಂಡ ಬೆಂಕಿ ತಹಬದಿಗೆ ಬಂದಿದೆ. ಕಾರ್ಯಾಚರಣೆ ಮುಂದುವರಿದಿದೆ. ಈ ಹಡಗಿನಲ್ಲಿ ನಾಲ್ಕು ವಿಧದ ಅಪಾಯಕಾರಿ ಸರಕುಗಳಿವೆ. ಇವುಗಳನ್ನು ಸುಡುವ ದ್ರವಗಳು, ದಹನಕಾರಿ ವಸ್ತುಗಳು ಮತ್ತು ವಿಷಕಾರಿ ವಸ್ತುಗಳು ಎಂದು ವರ್ಗೀಕರಿಸಲಾಗಿದೆ ಎಂದು ಅಝೀಕಲ್ ಬಂದರು ಅಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ. ಕೇರಳ ಸಾಗರ ಮಂಡಳಿಯ ಅಧ್ಯಕ್ಷರು, ಕೇರಳ ಸಾಗರ ಮಂಡಳಿಯ ಸಿಇಒ, ಬಂದರು ನಿರ್ದೇಶಕರು ಮತ್ತು ಅಧಿಕಾರಿಗಳು ಎಲ್ಲರೂ ಕರಾವಳಿ ಕಾವಲು ಪಡೆ ಜೊತೆ ಸಂಪರ್ಕದಲ್ಲಿದ್ದಾರೆ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಘಟನೆ ಹಿನ್ನೆಲೆ: ಸಿಂಗಾಪುರದ ಕಂಟೈನರ್ ಹಡಗು ಎಂ.ವಿ. ವಾನ್ ಹೈಯಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಅನಾಹುತ ಸಂಭವಿಸಿದೆ. ಕೊಲಂಬೋದಿಂದ ಮುಂಬಯಿ ನ್ಹಾವಾ ಶೇವಾ ಕಂಟೈನರ್ ಟರ್ಮಿನಲ್‌ಗೆ ಈ ಹಡಗು ಪ್ರಯಾಣಿಸುತ್ತಿತ್ತು. ಜೂ.7ರಂದು ಕೊಲಂಬೋದಿಂದ ಹೊರಟ ಹಡಗು ಜೂ.10ರಂದು ಮುಂಬಯಿ ತಲುಪಬೇಕಿತ್ತು. ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಬೇಪೂರ್‌ನಿಂದ 70 ನಾಟಿಕಲ್ ಮೈಲು ದೂರದಲ್ಲಿ ಹಡಗು ಸಾಗುವ ವೇಳೆ ಸ್ಪೋಟ ಉಂಟಾಗಿ, ಬೆಂಕಿ ಹಡಗನ್ನು ಆವರಿಸಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net