ಶುಭಾರಂಭಗೊಂಡ ಮೂಲ ತಾಂತ್ರಿಕ ಪೂಜಾ ಪದ್ಧತಿ

27gkn1
Published on

ಗೋಕರ್ಣ: ಒಂದು ದಶಕದ ವಿರಾಮದ ನಂತರ ಇಲ್ಲಿನ ಪುರಾಣ ಖ್ಯಾತ ಆತ್ಮಲಿಂಗ ಸನ್ನಿಧಿ ಶ್ರೀ ಮಹಾಬಲೇಶ್ವರ ಮಂದಿರದಲ್ಲಿ ಪರಂಪರಾಗತ ಸಾಂಪ್ರದಾಯಿಕ ಮೂಲ ತಾಂತ್ರಿಕ ಪೂಜಾ ಪದ್ಧತಿ ಮಂಗಳವಾರ ಮಂದಿರದ ಪ್ರಧಾನ ಅರ್ಚಕ ವೇ.ಅನಂತರಾಜ ಅಡಿ ನೇತೃತ್ವದಲ್ಲಿ ಮರು ಶುಭಾರಂಭಗೊಂಡಿತು. ಮಂದಿರದಲ್ಲಿ ಪರಂಪರಾಗತವಾಗಿ ಮುಖ್ಯ ಅರ್ಚಕತ್ವ ನಿಭಾಯಿಸುವ ಆನುವಂಶೀಯ ಹಕ್ಕು ಹೊಂದಿದ್ದ ಕ್ಷೇತ್ರದ ಕೆಲವು ಮನೆತನಗಳಿಗೆ 2014ರಿಂದ ಆಡಳಿತ ಸಮಿತಿ ಅರ್ಚಕತ್ವ ನಿರ್ವಹಣೆ ನಿರ್ಬಂಧಿಸಿತ್ತು. ನ್ಯಾಯಮೂರ್ತಿ ಶ್ರೀಕೃಷ್ಣ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸರ್ಕಾರದಿಂದ ನೇಮಿಸಲಾದ ಹೊಸ ಮೇಲುಸ್ತುವಾರಿ ಸಮಿತಿ ಶ್ರೀಕ್ಷೇತ್ರದಲ್ಲಿ ಪರಂಪರೆಯಿಂದ ಸಾಗಿ ಬಂದ ಮೂಲ ಪೂಜಾ ಪದ್ಧತಿಗಳನ್ನು ಮರು ಜಾರಿಗೆ ತರಲು ಉತ್ಸುಕವಾಗಿರುವ ಕಾರಣ ದಶಕದ ಹಿಂದಿನ ನಿರ್ಬಂಧವನ್ನು ತೆರವುಗೊಳಿಸಿದೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಕೃಷ್ಣಾಷ್ಟಮಿ ಹಬ್ಬದ ನಿಮಿತ್ತ ಮಂದಿರದಿಂದ ಆಯೋಜಿತವಾಗುವ ಧಧಿಶಿಕ್ಯೋತ್ಸವದ ಪರ್ವದಿನದಂದು ಪ್ರಾತಃಕಾಲ ಶ್ರೀಮಹಾಬಲೇಶ್ವರ ಆತ್ಮಲಿಂಗಕ್ಕೆ ಆನುವಂಶೀಯ ಅರ್ಚಕ ವೇ. ಅನಂತರಾಜ ಅಡಿ ನೇತೃತ್ವದಲ್ಲಿ ಕ್ಷೇತ್ರದ ಇತರ ಅರ್ಚಕರು, ಉಪಾಧಿವಂತರು ಮತ್ತು ವೈದಿಕರ ಸಹಯೋಗದಲ್ಲಿ ಶ್ರಾವಣ ಮಾಸದ ವಿಶೇಷ ಕಟ್ಟಳೆ ಪೂಜೆ ನಡೆಯಿತು. ಈ ವೇಳೆ ಪ್ರಧಾನ ಅರ್ಚಕ ವೇ.ಗಣಪತಿ ಗಜಾನನ ಹಿರೇ, ವೇ.ಚಂದ್ರಶೇಖರ ಅಡಿ, ವೇ. ಶ್ರೀನಿವಾಸ ಅಡಿ, ವೇ.ನಾಗರಾಜ ಜೋಶಿ, ಮಂದಿರ ಸಮಿತಿಯ ವೇ.ಸುಬ್ರಹ್ಮಣ್ಯ ಅಡಿ, ಮಹೇಶ ಹಿರೇಗಂಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net