ಇಂಜಿನಿಯರ್ ಬಾರದೆ ಅರ್ಧಕ್ಕೆ ನಿಂತ ಕಾಮಗಾರಿಗಳು ; ಅನುದಾನ ವಾಪಾಸಾಗುವ ಆತಂಕ ; ಮೂಲಸೌಕರ್ಯವಿಲ್ಲದೆ ಸಾರ್ವಜನಿಕರ ಪರದಾಟ

13 pvg land photo 3
Published on

ಪಾವಗಡ : ಭೂಸೇನಾ ನಿಗಮದ ಇಂಜಿನಿಯರ್ ವರ್ಷದಿಂದ ತಾಲೂಕಿಗೆ ಅಗಮಿಸದೆ ಇರುವುದರಿಂದ ನವಗ್ರಾಮ, ಗ್ರಾಮವಿಕಾಸ, ಯೋಜನೆಗಳಲ್ಲಿ ಮಂಜೂರಾಗಿರುವ ಸಮುದಾಯ ಭವನ, ಸಿಸಿ ರಸ್ತೆ, ಚರಂಡಿ ಕಾಮಗಾರಿಗಳಿನ್ನೂ ಆರಂಭವೇ ಆಗಿಲ್ಲ.

ಮಂಜೂರಾಗಿರುವ ಕಾಮಗಾರಿಗಳು ಅರ್ಧಕ್ಕೆ ನಿಂತಿರುವುದರಿಂದ ಗುತ್ತಿಗೆದಾರರು, ಕೂಲಿಕಾರರಿಗೂ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ವೆಂಕಟಾಪುರ ಮತ್ತು ನಾಗಲಮಡಿಕೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಮಂಜೂರಾಗಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದೆ ಹಾಗೂ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಅನುದಾನ ವಾಪಸಾಗಲಿದೆ. ಭೂಸೇನಾ ನಿಗಮದ ಇಂಜಿನಿಯರ್ ಮಹದೇವಪ್ಪ ಅನಾರೋಗ್ಯ ಕಾರಣದಿಂದ ತಾಲೂಕಿಗೆ ಆಗಮಿಸದಿರುವುದರಿಂದ ತಕ್ಷಣ ಮತ್ತೊಬ್ಬ ಇಂಜಿನಿಯರ್ ನೇಮಿಸಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎಂದು ನಾಗಲಮಡಿಕೆ ಗ್ರಾಪಂ ಸದಸ್ಯರಾದ ನಾಗರಾಜು, ಮಂಜುನಾಥ್, ನರಸಿಂಹಪ್ಪ, ದಲಿತ ಮುಖಂಡರಾದ ರಾಮಾಂಜಿ, ಓಬಳಪ್ಪ, ಸುಬ್ರಮಣಿ, ಮದ್ಗದಿಲೇಟಿ, ದುಗ್ಗಪ್ಪ, ತಿಮ್ಮರಾಯಪ್ಪ ಒತ್ತಾಯಿಸಿದ್ದಾರೆ.

ಅರ್ಧಕ್ಕೆ ನಿಂತಿರುವ ಕಾಮಗಾರಿಗಳು ; ವೆಂಕಟಾಪುರದ ಎಸ್‌ಸಿ, ಎಸ್‌ಟಿ ಕಾಲನಿಗಳಲ್ಲಿ 75 ಲಕ್ಷರೂ. ಕಾಮಗಾರಿ, ಸಿಂಗರೆಡ್ಡಿಹಳ್ಳಿಯಲ್ಲಿ 1 ಕೋಟಿ ರೂ. ವೆಚ್ಚದ ಸಮುದಾಯ ಭವನ, ನಿಡಗಲ್‌ನಲ್ಲಿ 1 ಕೋಟಿ ರೂ. ವೆಚ್ಚದ ವಾಲ್ಮೀಕಿ ಸಮುದಾಯ ಭವನ, ನಾಗಲಮಡಿಕೆಯ ಗ್ರಾಮ ವಿಕಾಸ ಯೋಜನೆಯಲ್ಲಿ 75 ಲಕ್ಷ ರೂ. ವೆಚ್ಚದ ಎಸ್‌ಸಿ ಎಸ್‌ಟಿ ಕಾಲನಿಯಲ್ಲಿನ ಸಿ.ಸಿ. ರಸ್ತೆ ಕಾಮಗಾರಿ, ಗಂಗಾವರ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ಸಮುದಾಯ ಭವನ, ಕೆ.ಟಿ.ಹಳ್ಳಿಯಲ್ಲಿ 15 ಲಕ್ಷ ರೂ. ವೆಚ್ಚದ ನರಸಿಂಹಸ್ವಾಮಿ ದೇವಸ್ಥಾನದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸೇವಾಲಾಲ್‌ಪುರ ತಾಂಡಾದಲ್ಲಿ ಸಿಸಿ ರಸ್ತೆಗಳು ಪೂರ್ಣಗೊಂಡಿದ್ದು, ಚರಂಡಿ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ನಲಿಗಾನಹಳ್ಳಿಯಲ್ಲಿ 10 ಲಕ್ಷ ರೂ. ವೆಚ್ಚದ ಸಮುದಾಯ ಭವನ ೂರ್ಣಗೊಂಡಿಲ್ಲ.

ಪಾವಗಡ ತಾಲೂಕಿನ ಇಂಜಿನಿಯರ್ ಮಹದೇವಪ್ಪಗೆ ಅಪಘಾತವಾಗಿರುವುರಿಂದ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಸದಕ್ಕೆ ಸಿಬ್ಬಂದಿ ನೇಮಿಸಿದ್ದು, ಕೆಲದಿನಗಳಲ್ಲಿ ಪೂರ್ಣಪ್ರಮಾಣದ ಇಂಜಿಯರ್ ನಿಯೋಜನೆ ಮಾಡಲಾಗುವುದು. ಹನುಮಂತಪ್ಪ, ಜಿಲ್ಲಾಭೂಸೇನಾ ನಿಗಮಾಧಿಕಾರಿ ತುಮಕೂರು ಗ್ರಾಮದ ಕಾಲನಿಗಳ ರಸ್ತೆ ಚರಂಡಿ ಅಭಿವೃದ್ಧಿಗಾಗಿ ಗ್ರಾಮವಿಕಾಸ ಯೋಜನೆಯಲ್ಲಿ 75 ಲಕ್ಷರೂ. ಮಂಜೂರಾಗಿ 3 ವರ್ಷ ಕಳೆದರೂ ಕಾಮಗಾರಿ ಪ್ರಾರಂಭಿಸಿಲ್ಲ. ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಗೆ ನೀರು ಹರಿದು ರೋಗರುಜಿನಗಳ ತಾಣವಾಗುತ್ತಿದೆ. ಆನಂದ ವೆಂಕಟಾಪುರ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net