

ಹೂವಿನಹಿಪ್ಪರಗಿ: ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಮುಖ್ಯ ಗುರಿ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.
ಪರಿಶಿಷ್ಟ ಜಾತಿ ಕಾಲನಿಗಳಲ್ಲಿ 2022-23ನೇ ಸಾಲಿನ ಮೂಲಭೂತ ಸೌಕರ್ಯ ಯೋಜನೆಯಡಿ ಮತಕ್ಷೇತ್ರದ ಹೂವಿನಹಿಪ್ಪರಗಿ ಗ್ರಾಮದ ಡಾ.ಬಸವರಾಜ ನಗರದಲ್ಲಿ ಭಾನುವಾರ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಜತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರೂ ಪಕ್ಷ ಭೇದ ಮರೆತು ಕೈಜೋಡಿಸಬೇಕು. ಸರ್ಕಾರದ ಎಲ್ಲ ಸವಲತ್ತುಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಎರಡು ರಾಷ್ಟ್ರಿಯ ಪಕ್ಷಗಳನ್ನು ಧಿಕ್ಕರಿಸಿ ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡುವ ಮೂಲಕ ಮತಕ್ಷೇತ್ರದಲ್ಲಿ ಬದಲಾವಣೆ ತಂದಿದ್ದೀರಿ. ಎಲ್ಲ ಧರ್ಮ- ಜಾತಿಯ ಜನರ ಆಶೀರ್ವಾದದೊಂದಿಗೆ ನಾನು ಶಾಸಕನಾಗಿದ್ದೇನೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಕಂಕಣಬದ್ಧನಾಗಿ ಕೆಲಸ ಮಾಡುವ ಮೂಲಕ ನಿಮ್ಮ ನಂಬಿಕೆ ಹುಸಿಯಾಗದಂತೆ ನೋಡಿಕೊಳ್ಳುತ್ತೇನೆ. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಬಾರದು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಶಿವಬಾಯಿ ಮಾದರ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಶಾಂತಗೌಡ ನಾಡಗೌಡ, ಗುರುನಗೌಡ ಪಾಟೀಲ, ನಿಂಗಣ್ಣ ಶಿವಯೋಗಿ, ಮುರುಗೇಶ ತಾಳಿಕೋಟಿ, ಸಂಗಮೇಶ ಹಳ್ಳೂರ, ಶರಣು ಬ್ಯಾಕೋಡ, ಶಿವಾನಂದ ತಾಳಿಕೋಟಿ, ಮುಸಾ ಕಾಚಾಪುರ, ಚನ್ನಪ್ಪ ತಿಳಗೋಳ, ಗೌಡಪ್ಪಗೌಡ ಪಾಟೀಲ, ಸಿದ್ದು ಹಾದಿಮನಿ, ಚಂದು ಗುಂಡಾನವರ, ಹುಸೇನಬುಡ್ಡಾ ಚಪ್ಪರಬಂದ, ಅಶೋಕ ಶಿವಯೋಗಿ, ಪ್ರಕಾಶ ಉಮರ್ಜಿ, ಅಂಬರೇಶ ನಾಡಗೌಡ, ಚಂದ್ರಶೇಖರ ನಾಡಗೌಡ, ಭೀಮಪ್ಪ ಮಾದರ, ಶಿವಯೋಗೆಪ್ಪ ಶಿವಯೋಗಿ, ಪ್ರಕಾಶ ತೋಟದ ಇತರರಿದ್ದರು.
ಮತಕ್ಷೇತ್ರದ ಅಂಬಳನೂರ, ಅಂಬಳನೂರ ತಾಂಡಾ, ಆರೇಶಂಕರ, ಬ್ಯಾಲಿಹಾಳ ಗ್ರಾಮಗಳಲ್ಲಿ ಸಿಸಿ ರಸ್ತೆಗಳ ಭೂಮಿಪೂಜೆ ಕಾರ್ಯಕ್ರಮ ನೆರವೇರಿಸಿದರು.