

ಹಿರೇಕೆರೂರ: ಪಟ್ಟಣದ ಮಾಸೂರು ರಸ್ತೆಗೆ ಹೊಂದಿಕೊಂಡಿರುವ ಕೈಗಾರಿಕಾ ಪ್ರದೇಶ ಆರಂಭಗೊಂಡಾಗಿನಿಂದ ಒಂದಿಲ್ಲೊಂದು ಮೂಲಸೌಕರ್ಯ ಸಮಸ್ಯೆ ಎದುರಿಸುತ್ತಲೇ ಇದೆ. ಪರಿಣಾಮ ಉದ್ಯಮಿಗಳು ಇಲ್ಲಿ ಕೈಗಾರಿಕೆ ಸ್ಥಾಪನೆಗೆ ಹಿಂದೇಟು ಹಾಕುತ್ತಿದ್ದಾರೆ.
1983-84ರಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು, ಗ್ರಾಮೀಣ ಪ್ರದೇಶದಲ್ಲಿ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು, ಕರ್ನಾಟಕ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದರು. ಈ ಮೂಲಕ ತಾಲೂಕು ಕೇಂದ್ರಗಳಲ್ಲಿ ನಿಗಮದ ಶಾಖೆ ಆರಂಭಿಸಲಾಗಿತ್ತು. ಅದರಂತೆ ಪಟ್ಟಣದ ಹೊರವಲಯದ ಮಾಸೂರು ರಸ್ತೆಗೆ ಹೊಂದಿಕೊಂಡಿರುವ ವಡ್ಡಿನಕಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ 5 ಎಕರೆ ಗುರುತಿಸಿ, ಅದಕ್ಕೆ ಸಣ್ಣ ಕೈಗಾರಿಕೆ ಪ್ರದೇಶ ಎಂದು ನಾಮಕರಣ ಮಾಡಲಾಗಿತ್ತು.
ಈ ಪ್ರದೇಶದಲ್ಲಿ 15 ಲಕ್ಷ ರೂ. ವೆಚ್ಚ ಮಾಡಿ ನಿಗಮದಿಂದ 4 ಶೆಡ್ಗಳನ್ನು ನಿರ್ವಿುಸಲಾಗಿತ್ತು. ಇನ್ನೇನು ಕೈಗಾರಿಕೆಗಳು ಬಂದೇ ಬಿಟ್ಟವು ಎಂದು ನಿರುದ್ಯೋಗಿ ಯುವಕ, ಯುವತಿಯರು ಕನಸು ಕಂಡಿದ್ದರು. ಆದರೆ, ಆರಂಭದಲ್ಲಿ ಅಂತಹ ಯಾವುದೇ ಕೈಗಾರಿಕೆ ಚಟುವಟಿಕೆಗಳು ನಡೆಯಲಿಲ್ಲ. ಕೈಗಾರಿಕೆ ಆರಂಭಿಸುವುದಾಗಿ ಅರ್ಜಿ ಸಲ್ಲಿಸಿದವರಿಗೆ 5 ಎಕರೆಯಲ್ಲಿ 33 ನಿವೇಶನದಲ್ಲಿ 23 ಹಂಚಿಕೆಯಾಗಿವೆ. ಬಾಕಿ ಇರುವ ನಿವೇಶನಕ್ಕೆ ಅರ್ಜಿಗಳು ಬಂದಿದ್ದು, ಅವು ಪರೀಶೀಲನಾ ಹಂತದಲ್ಲಿವೆ.
ಇಲ್ಲಿ ಕೆಲ ಶೆಡ್ಗಳಲ್ಲಿ ಮೊಳೆ, ಅಡಕೆ ತಟ್ಟೆ, ಕೊಡಪಾನ, ಗುಜರಿ, ಸಿಮೆಂಟ್ ಇಟ್ಟಿಗೆ ತಯಾರಿಕೆ ಕೈಗಾರಿಕೆ ಆರಂಭಗೊಂಡಿವೆ. ಅದರಲ್ಲಿ ಈಗ ಗುಜರಿ ಮತ್ತು ಕೊಡಪಾನ ತಯಾರಿಕಾ ಘಟಕ ಬಿಟ್ಟರೆ ಉಳಿದ ಎಲ್ಲ ಉದ್ಯಮಗಳು ಮೂಲಸೌಕರ್ಯ ಕೊರತೆಯಿಂದ ಸ್ಥಗಿತವಾಗಿದೆ. ಶೆಡ್ಗಳು ಖಾಲಿ ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಿವೆ.
ಕೈಗಾರಿಕಾ ಪ್ರದೇಶಕ್ಕೆ ತೆರಳುವ ಮುಖ್ಯರಸ್ತೆ ಮಣ್ಣು -ಗುಂಡಿಗಳಿಂದ ಕೂಡಿದೆ. ಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗಿಡ, ಗಂಟಿಗಳು ಮತ್ತು ಕಸದಿಂದ ಮುಚ್ಚಿಕೊಂಡಿವೆ. ತಗ್ಗು ಪ್ರದೇಶವಾಗಿದ್ದರಿಂದ ಚರಂಡಿ ನೀರು ಹರಿಯದೆ, ಶೆಡ್ಗಳ ಮುಂದೆ ಸಂಗ್ರಹಗೊಂಡಿದೆ. ವಿಷ ಜಂತುಗಳು ಶೆಡ್ ಒಳಗೆ ಬರಲಾರಂಭಿಸಿದ್ದು, ಜೀವಭಯ ಕಾಡುತ್ತಿದೆ. ವಿದ್ಯುತ್ ವ್ಯವಸ್ಥೆ ಮರೀಚಿಕೆಯಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಸುತ್ತ ಕಾಂಪೌಂಡ್ ನಿರ್ವಿುಸಿಲ್ಲ, ಮುಖ್ಯರಸ್ತೆಯಲ್ಲಿ ನಾಮಫಲಕವನ್ನೂ ಅಳವಡಿಸಿಲ್ಲ.
ಕೈಗಾರಿಕಾ ನಿಗಮದ ಹುಬ್ಬಳ್ಳಿ ಕಚೇರಿ ಅಧಿಕಾರಿಗಳು ಇಲ್ಲಿಗೆ ಆಗಮಿಸಿ ಪರಿಶೀಲಿಸಿದ್ದಾರೆ. ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ಹೇಳಿದ್ದರು. ಈವರೆಗೆ ಯಾವುದೇ ಸೌಕರ್ಯ ಒದಗಿಸಿಲ್ಲ. ಇಲ್ಲಿನ ಅವ್ಯವಸ್ಥೆ ಸರಿಪಡಿಸದೇ ಹೋದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಇಲ್ಲಿನ ಉದ್ಯಮಿಗಳು ಹೇಳುತ್ತಾರೆ.
ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದವರು ಈವರೆಗೆ ಅಗತ್ಯ ಮೂಲಸೌಕರ್ಯ ಒದಗಿಸಿಲ್ಲ. ಆದರೆ, ತೆರಿಗೆಯನ್ನು ಪ್ರತಿವರ್ಷ ಚಾಚೂ ತಪ್ಪದೇ ತುಂಬಿಸಿಕೊಳ್ಳುತಾರೆ. ನಿರ್ವಹಣೆ ವೆಚ್ಚ ಎಂದು ಹೇಳಿ ದಂಡ ವಸೂಲಿ ಮಾಡುತ್ತಿದ್ದಾರೆ. ಚರಂಡಿ, ಕುಡಿಯುವ ನೀರು, ವಿದ್ಯುತ್ ದೀಪ ಅಳವಡಿಕೆ, ವಿದ್ಯುತ್ ಸಂಪರ್ಕ, ರಸ್ತೆ ವ್ಯವಸ್ಥೆಯಿಲ್ಲ. ತಗ್ಗು ಪ್ರದೇಶವಾಗಿದ್ದರಿಂದ ಮಳೆಗಾಲದಲ್ಲಿ ನೀರು ಶೆಡ್ ಒಳಗೆ ನುಗ್ಗಿ ಕಟ್ಟಡಗಳಿಗೆ ಹಾನಿಯಾಗುತ್ತಿದೆ. ಇದನ್ನು ಸರಿಪಡಿಸಬೇಕು. | ಜಗದೀಶ ಮುರಡೇಶ್ವರ, ಗಾರ್ವೆಂಟ್ ಮತ್ತು ಮನೆ ನಿರ್ವಣದ ವಸ್ತುಗಳ ತಯಾರಿಕೆ ಕೈಗಾರಿಕೆ ಉದ್ಯಮಿ
..............
ಇಲ್ಲಿನ ಅವ್ಯವಸ್ಥೆ ಸರಿಪಡಿಸಲು ಅಭಿಯಂತರು ಅಂದಾಜು ಪಟ್ಟಿ ಮಾಡಿದ್ದಾರೆ. ಇನ್ನೂ 10 ನಿವೇಶನಗಳು ಖಾಲಿ ಇವೆ. ಇವುಗಳಿಗೆ ಅರ್ಜಿ ಬಂದಿದ್ದು, ಇದರಲ್ಲಿ 4 ನಿವೇಶನಗಳು ಮಂಜೂರಾಗಿ ಪ್ಲಾನ್ ಅಪ್ರೂಲ್ ಮಾಡಿಕೊಳ್ಳಲಾಗಿದೆ. ಇನ್ನುಳಿದಂತೆ 6 ಖಾಲಿ ಇವೆ. ಅವು ಕೂಡಾ ನೋಟಿಫಿಕೇಷನ್ ಕರೆಯಲಾಗಿದೆ. ಪ್ಲಾನ್ ಅಪ್ರೂಲ್ ಮಾಡಿ ಮಂಜೂರು ಹಂತದಲ್ಲಿವೆ. | ಸುನಿತಾದೇವಿ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಹುಬ್ಬಳ್ಳಿ, ಸಹಾಯಕ ವ್ಯವಸ್ಥಾಪಕಿ