

ಹೂವಿನಹಿಪ್ಪರಗಿ: ದೇವರಹಿಪ್ಪರಗಿ ಕ್ಷೇತ್ರ 120 ಹಳ್ಳಿಗಳಿಂದ ಕೂಡಿದ ಬಹುದೊಡ್ಡ ಕ್ಷೇತ್ರವಾಗಿದ್ದು, ಪ್ರತಿಯೊಂದು ಗ್ರಾಮದ ರಸ್ತೆ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.
ಕರ್ನಾಟಕ ರೂರಲ್ ಇನ್‌ಪ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್ ಯೋಜನೆಯಡಿ 2022-23ನೇ ಸಾಲಿನ ಲೆಕ್ಕ ಶೀರ್ಷಿಕೆ 5054 ರಡಿಯಲ್ಲಿ ಸೋಲವಾಡಗಿ ಗ್ರಾಮದಲ್ಲಿ ಸೋಲವಾಡಗಿ ಗ್ರಾಮದಿಂದ ಕಾನ್ಯಾಳ ಗ್ರಾಮದವರೆಗೆ ಐದು ಕೋಟಿ ರೂ. ವೆಚ್ಚದ 4-ಕಿ.ಮೀ.ರಸ್ತೆ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಸೋಮವಾರ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ರಸ್ತೆಗಳು, ಕುಡಿಯುವ ನೀರು, ನೀರಾವರಿ, ಶಾಲೆ ಕಟ್ಟಡ, ಶೌಚಗೃಹ ಸೇರಿ ಅನೇಕ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನಗಳನ್ನು ತರಲಾಗುತ್ತಿದೆ. ಈ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರು ಮುಂದಾಗಬೇಕು. ನಾನು ಇರುವಷ್ಟು ವರ್ಷ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಮತಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಪತ್ರಕರ್ತರು ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಸಂದೇಹ ಬೇಡ. ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಜಯಭೇರಿ ಬಾರಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಪ್ರಭುದೇವಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಗುರುನಗೌಡ ಪಾಟೀಲ, ಸಿದ್ರಾಮಪ್ಪಗೌಡ ಗೊಟಗುಣಕಿ, ಬಸವನಗೌಡ ಪಾಟೀಲ, ಶಿವಕುಮಾರ ನಂದವಾಡಗಿ, ಸಿದ್ದನಗೌಡ ಪಾಟೀಲ, ಪ್ರಕಾಶ ಹುಲ್ದೂರ, ಸೋಮಪ್ಪ ಗುಂದಕಿ, ರಮಜಾನ ಮುಜಾವರ, ಶರಣಗೌಡ ಬಿರಾದಾರ, ಬಾಬುರಾಯ ಗೊಟಗುಣಕಿ, ಸುರೇಶ ಹುಲ್ಲೂರ, ಸಿದ್ದನಗೌಡ ನಂದವಾಡಗಿ ಇತರರಿದ್ದರು.