ಮುರ್ಡೇಶ್ವರಕ್ಕೆ ಮೂಲಸೌಕರ್ಯ ಮರೀಚಿಕೆ

BKL
Published on

ಭಟ್ಕಳ: ರಾಜ್ಯದ ಪ್ರಸಿದ್ಧ ಸ್ಥಳವಾದ ಮುರ್ಡೇಶ್ವರದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಪ್ರತಿದಿನ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದ್ದು, ಜಿಲ್ಲಾಡಳಿತಕ್ಕೆ ಹಾಗೂ ಸ್ಥಳೀಯ ಆಡಳಿತಕ್ಕೆ ದೂರಿನ ಸರಮಾಲೆಯೇ ಹರಿದು ಬರುತ್ತಿದೆ.

ಮುರ್ಡೇಶ್ವರಕ್ಕೆ ಪ್ರತಿನಿತ್ಯ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ. ಆದರೆ, ಪ್ರವಾಸಿಗರ ಆಗಮನಕ್ಕೆ ತಕ್ಕಂತೆ ಮುರ್ಡೇಶ್ವರ ಮಾತ್ರ ಬೆಳವಣಿಗೆ ಆಗದಿರುವುದು ಪ್ರವಾಸಿಗರ ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

2016ರಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಿದ ಗುತ್ತಿಗೆದಾರ ಮುರ್ಡೇಶ್ವರ ಗೇಟ್‌ನಿಂದ ದೇವಸ್ಥಾನದವರೆಗಿನ ರಸ್ತೆ, ಇನ್ನೂ ಪೂರ್ಣಗೊಳಿಸಿಲ್ಲ. ಸಿಮೆಂಟ್ ರಸ್ತೆ ನಿರ್ಮಾಣ, ರಸ್ತೆಯ ಇಕ್ಕೆಲಗಳಲ್ಲಿ ಲೈಟ್‌ಗಳನ್ನು ಅಳವಡಿಸಬೇಕೆಂಬ ನಿರ್ಣಯ 2013ರಲ್ಲೇ ಆಗಿದ್ದರೂ ಈವರೆಗೂ ಪೂರ್ಣಗೊಂಡಿಲ್ಲ. ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದವರೂ ಸಂಬಂಧಪಟ್ಟ ಇಲಾಖೆಗಳಿಗೆ, ಸಾಮಾಜಿಕ ಜಾಲತಾಣಗಳ ಮೂಲಕ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸ್ವಚ್ಛತೆ ಮರೀಚಿಕೆ ಆಗಿದೆ. ರಜಾದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಮೀತಿ ಮೀರುತ್ತಿದ್ದು ನಿಯಂತ್ರಣಕ್ಕೆ ಬರುತ್ತಿಲ್ಲ.

ಮುರ್ಡೇಶ್ವರದ ಸಮುದ್ರ ತೀರವು, ತ್ಯಾಜ್ಯಗಳ ತಾಣವಾಗಿದ್ದು, ನಿರ್ವಹಣೆ ಶೂನ್ಯ. ವರ್ಷಕ್ಕೊಮ್ಮೆ, ಜಿಲ್ಲಾಧಿಕಾರಿಯೂ ಸೇರಿದಂತೆ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಒಂದೆರಡು ದಿನಗಳ ಪೂರ್ವ ತಯಾರಿಯೊಂದಿಗೆ, ಸ್ವಚ್ಛತೆಯ ಬಗ್ಗೆ ಸರ್ಕಾರದ ಸಾಧನೆ ಎಂಬಂತೆ, ಸ್ವಚ್ಛತಾ ಕಾರ್ಯಕ್ರಮವನ್ನು ಏರ್ಪಡಿಸುವುದು, ಸಾರ್ವಜನಿಕರ ಹಾಗೂ ಬಂದ ಪ್ರಜ್ಞಾವಂತ ಪ್ರವಾಸಿಗರ, ಅವಹೇಳನಕ್ಕೆ ಕಾರಣವಾಗಿದೆ. ಯೋಗ್ಯ ವ್ಯವಸ್ಥೆ ಇಲ್ಲದೆ, ಮುರ್ಡೇಶ್ವರದಲ್ಲಿ ಪ್ರತಿಯೊಂದಕ್ಕೂ ಸುಲಿಗೆ ಎಂಬ ಮಾತು ಭೇಟಿ ನೀಡುವ ಎಲ್ಲ ಪ್ರವಾಸಿಗರಿಂದ ಕೇಳಿ ಬರುತ್ತಿದೆ.

ಶ್ರೀ ಕ್ಷೇತ್ರಕ್ಕೆ ಬರುವ ಪ್ರವಾಸಿಗರು, ಸಂಚಾರಿ ನಿಯಮಗಳನ್ನು ಮೀರುತ್ತಿರುವುದು ಪ್ರತಿನಿತ್ಯವೂ ಕಂಡು ಬರುತ್ತಿದ್ದು, ಈ ಬಗ್ಗೆ, ಪೊಲೀಸ್ ಇಲಾಖೆ ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಅಲ್ಲಲ್ಲಿ, ಶೌಚಾಲಯಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ವಾಹನಗಳನ್ನು ನಿಲ್ಲಿಸುವಂತಹ ಸ್ಥಳ ಗುರುತಿಸಲೇ ಬೇಕಾಗಿದೆ. ಈ ನಿಟ್ಟಿನಲ್ಲಿ, ಮುರ್ಡೇಶ್ವರದ ಸಮಗ್ರ ಅಭಿವೃದ್ಧಿಗೆ, ಸ್ಥಳೀಯಾಡಳಿತ, ತಾಲೂಕಾಡಳಿತ, ಜಿಲ್ಲಾಡಳಿತದ ಎಲ್ಲಾ ಇಲಾಖೆಗಳು, ಕಾರ್ಯೋನ್ಮುಖರಾಗಬೇಕು ಎಂದು ಮುರ್ಡೇಶ್ವರದ ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net