

ಹೊನ್ನಾಳಿ: ತಾಲೂಕಿನಲ್ಲಿ ಸರ್ಕಾರಿ 31 ಹಾಸ್ಟೆಲ್‌ಗಳಿದ್ದು, ಎಲ್ಲ ವಿದ್ಯಾರ್ಥಿನಿಲಯಗಳಲ್ಲೂ ಸ್ವಚ್ಛತೆ, ಮೂಲಸೌಕರ್ಯಗಳನ್ನು ಹೊಂದಿವೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಪಟ್ಟಣದ ಹಿರೇಕಲ್ಮಠದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ 2ನೇ ವಿಭಾಗವನ್ನು ಶುಕ್ರವಾರ ಉದ್ಘಾಟಿಸಿ, ಮಾತನಾಡಿದರು.
ಈಗಾಲೇ ಹೊನ್ನಾಳಿ- ನ್ಯಾಮತಿ ತಾಲೂಕುಗಳಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ 25 ಹಾಸ್ಟೆಲ್‌ಗಳಿದ್ದು, ಇದರೊಂದಿಗೆ 6 ಮೊರಾರ್ಜಿ ಹಾಸ್ಟೆಲ್‌ಗಳು ಸೇರಿ 31 ವಿದ್ಯಾರ್ಥಿನಿಲಯಗಳಿದ್ದು, ಎಲ್ಲ ಕಡೆ ಮೂಲಸೌಕರ್ಯಗಳಿರುವುದು ಸಂತೋಷದ ವಿಚಾರ ಎಂದರು.
ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆನ್‌ನಲ್ಲಿ 75 ಮಕ್ಕಳಿಗೆ ಅವಕಾಶವಿದೆ. ಸಾಸ್ವೇಹಳ್ಳಿಯಲ್ಲಿ ಒಂದು ಹಾಸ್ಟೆಲ್ ಮಂಜೂರಾಗಿದೆ. ಮುಂದಿನ ವರ್ಷದಿಂದ ಆರಂಭಗೊಳ್ಳಲಿದೆ ಎಂದರು.
ಅನೇಕ ಶಾಲಾ- ಕಾಲೇಜುಗಳಿರುವ ನ್ಯಾಮತಿಯಲ್ಲಿ ಕೂಡ ಒಂದು ಬಾಲಕರ ಹಾಸ್ಟೆಲ್‌ಗೆ ಸಾರ್ವಜನಿಕರು, ಅಧಿಕಾರಿಗಳ ಬೇಡಿಕೆ ಇದೆ. ಈ ಬಗ್ಗೆ ಸರ್ಕಾರದ ಹಂತದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಶೀಘ್ರವೇ ಹಾಸ್ಟೆಲ್ ತೆರೆಯುವುದಾಗಿ ಹೇಳಿದರು.
ಹಿರೇಕಲ್ಮಠದ ಡಾ. ಒಡೆರ್ಯ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆಂಧ್ರ ಪ್ರದೇಶದಿಂದ ಅನೇಕ ವಿದ್ಯಾರ್ಥಿಗಳು ಶ್ರೀಮಠಕ್ಕೆ ವಿದ್ಯಾರ್ಜನೆಗಾಗಿ ಬರುತ್ತಿದ್ದು, ಇವರು ಕನ್ನಡ ಐಚ್ಚಿಕವಾಗಿ ತೆಗೆದುಕೊಂಡು ಅತಿ ಹೆಚ್ಚು ಅಂಕ ಪಡೆಯುತ್ತಿದ್ದಾರೆ. ಕೆಲವರು ವೈದ್ಯಕೀಯ ಶಿಕ್ಷಣ ಪಡೆಯಲು ಹೋಗಿದ್ದಾರೆ. ಹೊರ ರಾಜ್ಯದ ವಿದ್ಯಾರ್ಥಿಗಳು ಎನ್ನುವ ಕಾರಣಕ್ಕೆ ಅವರಿಗೆ ಹಾಸ್ಟೆಲ್‌ಗಳಲ್ಲಿ ಅವಕಾಶ ಸಿಗುತ್ತಿಲ್ಲ. ಈ ಬಗ್ಗೆ ಶಾಸಕರು ಸರ್ಕಾರದ ಗಮನ ಸೆಳೆದು ಇವರಿಗೂ ಅವಕಾಶ ಕೊಡಿಸಬೇಕು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಎಚ್.ಗಾಯತ್ರಿ ಮಾತನಾಡಿ, ಜಿಲ್ಲೆಯ ಎಲ್ಲ ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಸಿಗಬೇಕಾದ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.
ಕೋಣಂದೂರು ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಮೃತ್ಯುಂಜಯ ಸ್ವಾಮಿ, ಹಾಸ್ಟೆಲ್ ಮೇಲ್ವಿಚಾರಕಿ ರೂಪಾ, ಇಲಾಖೆಯ ಕುಮಾರ್ ಬಾರ್ಕಿ, ಶ್ರೀಮಠದ ವ್ಯವಸ್ಥಾಪಕ ಎಂ.ಪಿ.ಚನ್ನಬಸಯ್ಯ, ಕಾಂಗ್ರೆಸ್ ಯುವ ಮುಖಂಡ ಎ.ಜಿ.ಪ್ರಕಾಶ್, ರವೀಶ್ ಇತರರಿದ್ದರು.