ಬಂಡೇಮಠ ಬಡಾವಣೆಗೆ ಮೂಲಸೌಕರ್ಯ: ಕಾರ್ಯಾದೇಶ ನೀಡಲು ಅರ್ಜಿ ಸಮಿತಿ ಸೂಚನೆ

bandemathroad
Published on

ಬೆಂಗಳೂರು: ಕೆಂಗೇರಿ ಬಳಿ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ನಿರ್ಮಿತ ಬಂಡೇಮಠ ಬಡಾವಣೆಗೆ ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಲ್ಪಿಸಲು ಒಂದು ವಾರದೊಳಗೆ ಕಾರ್ಯಾದೇಶ ನೀಡುವಂತೆ ವಿಧಾನಸಭೆಯ ಅರ್ಜಿಗಳ ಸಮಿತಿ ಬಿಬಿಎಂಪಿಗೆ ಸೂಚನೆ ನೀಡಿದೆ.

ಬಡಾವಣೆ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯ ಕಲ್ಪಿಸಲು ಕೆಎಚ್‌ಬಿ ಮೀನಮೇಷ ಎಣಿಸುತ್ತಿದೆ ಎಂದು ದೂರಿ ಅಲ್ಲಿನ ನಿವಾಸಿಗಳು ವಿಧಾನಸಭೆ ಅರ್ಜಿಗಳ ಸಮಿತಿಗೆ ಸಲ್ಲಿಸಿರುವ ದೂರು ಆದರಿಸಿ ಈ ನಿರ್ಧಾರ ಹೊರಬಿದ್ದಿದೆ. ದಶಕಗಳಿಂದ ಸೌಕರ್ಯವಿಲ್ಲದೆ ಪರಿತಪಿಸುತ್ತಿರುವ ನಾಗರಿಕರಿಗೆ ಸಾಂತ್ವನ ಹೇಳುವ ಬದಲು ಕಾಮಗಾರಿ ಕೈಗೊಂಡು ಸೌಲಭ್ಯವನ್ನು ಒದಗಿಸುವತ್ತ ಲಕ್ಷ್ಯ ಹರಿಸಬೇಕು ಎಂದು ಸಮಿತಿಯು ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದೆ.

ಕಳೆದ ನವೆಂಬರ್‌ನಲ್ಲಿ ನಡೆದ ಅರ್ಜಿಗಳ ಸಮಿತಿ ಸಭೆಯಲ್ಲಿ ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಿಕೊಂಡು ಕೂಡಲೇ ಮೂಲಸೌಕರ್ಯ ಕಲ್ಪಿಸುವಂತೆ ಸೂಚಿಸಲಾಗಿತ್ತು. 10 ತಿಂಗಳೇ ಕಳೆದರೂ ಕಾರ್ಯಾದೇಶ ನೀಡದೆ ಕಾಮಗಾರಿ ಆರಂಭಿಸಿ, ಚುನಾವಣೆ ನೀತಿಸಂಹಿತೆ ನೆಪ ಒಡ್ಡಿ ಬಳಿಕ ಅರ್ಧಕ್ಕೆ ನಿಲ್ಲಿಸಿ, ಜನರಿಗೆ ತೊಂದರೆ ನೀಡಿರುವ ಬಿಬಿಎಂಪಿ ವಿರುದ್ಧ ಅರ್ಜಿಗಳ ಸಮಿತಿ ಅಸಮಾಧಾನ ವ್ಯಕ್ತಪಡಿಸಿತು.

ಕೆಎಚ್‌ಬಿ ತಾರತಮ್ಯ:

ಈ ಮಧ್ಯೆ ಕೆಎಚ್‌ಬಿ ಬಡಾವಣೆಯ ಒಂದೇ ಬ್ಲಾಕ್‌ನ ಎಲ್ಐಜಿ ಕಟ್ಟಿದ ಮನೆಗಳ ಪೈಕಿ ಕೆಲವರಿಗೆ ಚದರಡಿಗೆ ಮಾಸಿಕ 25 ಪೈಸೆ, ಮತ್ತೆ ಕೆಲವರಿಗೆ 75 ಪೈಸೆ ಹಾಗೂ ಇನ್ನೂ ಕೆಲವರಿಗೆ 1 ರೂ. ಚದರಡಿಯಂತೆ ನಿರ್ವಹಣಾ ಶುಲ್ಕ ವಸೂಲಿ ಮಾಡುತ್ತಿದ್ದು, ತಾರತಮ್ಯದ ವಿರುದ್ಧವೂ ಸಂಘ ಅರ್ಜಿಗಳ ಸಮಿತಿಗೆ ದೂರು ಸಲ್ಲಿಸಿದೆ. ಮೂಲಸೌಕರ್ಯವನ್ನೇ ಕಲ್ಪಿಸದೆ 15, 20 ಸಾವಿರ ಮಾಸಿಕ ನಿರ್ವಹಣಾ ಶುಲ್ಕ ವಿಧಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಸ್ವತಃ ನಿಕಟಪೂರ್ವ ಮುಖ್ಯಮಂತ್ರಿಯವರು ವಿಧಾನಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಬಡಾವಣೆ ಬಿಬಿಎಂಪಿಗೆ ಹಸ್ತಾಂತರ ಆದ ಬಳಿಕ ನಿರ್ವಹಣಾ ಶುಲ್ಕ ಮನ್ನಾ ಮಾಡುವ ಬಗ್ಗೆ ಕ್ರಮವಹಿಸುವುದಾಗಿ ಭರವಸೆ ನೀಡಿದ್ದರು. ಇದಾಗಿ ಒಂದು ವರ್ಷದಿಂದ ಯಾವುದೇ ನಿರ್ಧಾರ ಕೈಗೊಳ್ಳದ ಕೆಎಚ್‌ಬಿ ಕೆಲವು ನಿವಾಸಿಗಳಿಗೆ ನಿರಾಕ್ಷೇಪಣಾ ಪತ್ರ ನೀಡದ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಬಡಾವಣೆ ಹಸ್ತಾಂತರ ಆಗಿದ್ದರೂ ಖಾತಾ ಮಾಡಿಸಿಕೊಳ್ಳಲು ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ನಿರ್ವಹಣಾ ಶುಲ್ಕ ಕಡಿಮೆ ಮಾಡಿ ಎನ್‌ಒಸಿ ನೀಡಬೇಕು ಎಂದು ಸಂಘವು ಅರ್ಜಿ ಸಮಿತಿಗೆ ಮನವಿ ಮಾಡಿದೆ.

ಲೇಔಟ್ ನಿರ್ಮಾಗೊಂಡು 20 ವರ್ಷ ಸಂದರೂ, ಈವರೆಗೆ ಸಕಲ ಸೌಕರ್ಯವನ್ನು ಒದಗಿಸಲು ಕೆಎಚ್‌ಬಿಗೆ ಸಾಧ್ಯವಾಗಿಲ್ಲ. ಈ ಬಗ್ಗೆ ಹತ್ತಾರು ಬಾರಿ ಮಂಡಳಿಗೆ ಅಲೆದಾಟ ನಡೆಸಿದರೂ, ಸಬೂಬು ಹೇಳುತ್ತಲೇ ಇದ್ದ ಕಾರಣ ಅರ್ಜಿ ಸಮಿತಿ ಮೊರೆ ಹೋಗಿದ್ದೇವೆ. ಹಿಂದಿನ ಸಭೆಗಳಲ್ಲಿ ಹಿರಿಯ ಅಧಿಕಾರಿಗಳು ನೀಡಿರುವ ಭರವಸೆಯಂತೆ ಕೂಡಲೇ ಮೂಲಸೌಕರ್ಯ ಕಾಮಗಾರಿಯನ್ನು ಕೈಗೆತ್ತಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸಲಿ.

- ರಾಮಕೃಷ್ಣೇಗೌಡ, ಬಂಡೇಮಠ ಲೇಔಟ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

ಸಮಸ್ಯೆಗಳ ಆಗರ:

ಕೆಎಚ್‌ಬಿ ಬಂಡೇಮಠ ಲೇಔಟ್ ನಿರ್ಮಿಸಿ 20 ವರ್ಷ ಕಳೆದಿದೆ. ಸೈಟ್ ಹಂಚಿಕೆದಾರರು ಮನೆಗಳನ್ನು ನಿರ್ಮಿಸಿದ ಬಳಿಕವೂ ರಸ್ತೆ, ಚರಂಡಿ, ಬೀದಿದೀಪ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಿಲ್ಲ. ಒಂದೇ ಒಂದು ಉದ್ಯಾನ ಕೂಡ ಅಭಿವೃದ್ಧಿ ಆಗಿಲ್ಲ. ಕುಡಿಯುವ ನೀರು ಕೂಡ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಕಸ ನಿರ್ವಹಣೆಯೂ ಅಸಮರ್ಪಕವಾಗಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ದಿಢೀರ್ ಆಗಿ ಬಂದು ಕಾಮಗಾರಿ ಆರಂಭಿಸಿದರೂ, ಅಷ್ಟೇ ವೇಗದಲ್ಲಿ ನೀತಿಸಂಹಿತೆ ನೆಪದಲ್ಲಿ ಕೆಲಸವನ್ನು ಸ್ಥಗಿತಗೊಳಿಸಲಾಯಿತು ಎಂದು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಅರ್ಜಿಗಳ ಸಮಿತಿ ಗಮನಕ್ಕೆ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net