

ಬೆಂಗಳೂರು: ಎರಡು ದಶಕ ಕಳೆದರೂ ಅರ್ಕಾವತಿ ಬಡಾವಣೆ ನಿರ್ಮಾಣವನ್ನು ಪೂರ್ಣಗೊಳಿಸಲು ತಿಣುಕಾಡುತ್ತಿರುವ ಬಿಡಿಎ, ಈಗ ಮತ್ತೆ ಲೇಔಟ್‌ನ ವಿವಿಧ ಭಾಗಗಳಲ್ಲಿ ಮೂಲಸೌಕರ್ಯ ಒದಗಿಸಲು ಮುಂದಾಗಿದೆ.
ಮೂರು ವರ್ಷದ ಹಿಂದೆ 100 ಕೋಟಿ ರೂ. ವೆಚ್ಚ ಮಾಡಿ ರಸ್ತೆ, ಚರಂಡಿ ಹಾಗೂ ಇನ್ನಿತರ ಕೆಲಸ ಕಾರ್ಯಗಳನ್ನು ಕೈಗೊಂಡಿದ್ದ ಪ್ರಾಧಿಕಾರ, ಈಗ ಹನ್ನೊಂದು ಗ್ರಾಮಗಳಿಗೆ ಸೇರಿದ ಸ್ವಾಧೀನ ಪ್ರದೇಶದಲ್ಲಿರುವ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲಿದೆ. ಈ ಬಾರಿ ಹನ್ನೊಂದೂ ಗ್ರಾಮಗಳಲ್ಲಿನ ಬಡಾವಣೆಯ ಒಳಭಾಗದ ರಸ್ತೆಗಳನ್ನು ಡಾಂಬರೀಕರಣಗೊಳಿಸುವುದಾಗಿ ತಿಳಿಸಿದೆ.
ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಯಲಹಂಕ ಹಾಗೂ ಕೆ.ಆರ್.ಪುರ ತಾಲೂಕಿನ ಒಟ್ಟು 16 ಹಳ್ಳಿಗಳಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ರೀಡೂ ಬಳಿಕ ಉಳಿದಿರುವ ಜಮೀನಿನಲ್ಲಿ ಸೈಟ್‌ಗಳನ್ನು ರಚಿಸಿದ್ದರೂ, ಹೆಚ್ಚಿನವು ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇತ್ತು. ಹೀಗಾಗಿ ಭಾಗಶಃ ಪ್ರದೇಶದಲ್ಲಿ ಮಾತ್ರ ಮೂಲಸೌಕರ್ಯ ಕಲ್ಪಿಸಲಾಗಿತ್ತು. ಆದರೂ ಇಲ್ಲೆಲ್ಲ ಮನೆಗಳನ್ನು ನಿರ್ಮಿಸದ ಕಾರಣ ಗಿಡಗಂಟಿಗಳು ಬೆಳೆದು ಕಿರುಅರಣ್ಯವಾಗಿ ಮಾರ್ಪಟ್ಟಿದೆ. ಈಗ ಇಂತಹ ಜಾಗದಲ್ಲಿ ಒಳರಸ್ತೆಗಳಿಗೆ ಡಾಂಬರು ಹಾಕಿ 9 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ವಾಸಯೋಗ್ಯ ಬಡಾವಣೆ ಮಾಡಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಸೌಕರ್ಯ ಕಲ್ಪಿಸುವ ಗ್ರಾಮಗಳ ಹೆಸರು, ವೆಚ್ಚದ ವಿವರ:
ಚಳ್ಳಕೆರೆ ಗ್ರಾಮದ 19ನೇ ಬ್ಲಾಕ್ - 10 ಕೋಟಿ ರೂ.
ಶ್ರೀರಾಮಪುರ, ದಾಸರಹಳ್ಳಿಯ 8, 10, 11ನೇ ಬ್ಲಾಕ್ - 2 ಕೋಟಿ ರೂ.
ರಾಚೇನಹಳ್ಳಿ ಗ್ರಾಮದ 11ನೇ ಬ್ಲಾಕ್ - 4 ಕೋಟಿ ರೂ.
ಕೆ.ನಾರಾಯಣಪುರದ 5, 6, 17ನೇ ಬ್ಲಾಕ್ - 7 ಕೋಟಿ ರೂ.
ವೆಂಕಟೇಶಪುರ ಗ್ರಾಮದ 3, 8ನೇ ಬ್ಲಾಕ್ - 4.25 ಕೋಟಿ ರೂ.
ಜಕ್ಕೂರು ಗ್ರಾಮದ 1, 2, 7, 8ನೇ ಬ್ಲಾಕ್ - 16 ಕೋಟಿ ರೂ.
ಸಂಪಿಗೇಹಳ್ಳಿ ಗ್ರಾಮದ 2, 3ನೇ ಬ್ಲಾಕ್ - 19.50 ಕೋಟಿ ರೂ.
ಬೈರತಿ ಖಾನೆ ಗ್ರಾಮದ 18ನೇ ಬ್ಲಾಕ್ - 8.10 ಕೋಟಿ ರೂ.
ಹೆಣ್ಣೂರು ಗ್ರಾಮದ 20ನೇ ಬ್ಲಾಕ್ - 5 ಕೋಟಿ ರೂ.
ಗೆದ್ದಲಹಳ್ಳಿ ಗ್ರಾಮದ 16, 17ನೇ ಬ್ಲಾಕ್ - 5 ಕೋಟಿ ರೂ.
ಥಣಿಸಂದ್ರದ 4, 5, 6, 14, 15, 20ನೇ ಬ್ಲಾಕ್ 17.10 ಕೋಟಿ ರೂ.