

ತಾಳಿಕೋಟೆ: ತಾಲೂಕಿನ ಸಾಸನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಬನೂರ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಬುಧವಾರ ದಿಢೀರ್ ಭೇಟಿ ನೀಡಿ ಗ್ರಾಮದ ಮೂಲಸೌಕರ್ಯಗಳ ಕುರಿತು ಪರಿಶೀಲಿಸಿದರು.
ಕುಡಿಯುವ ನೀರು, ರಸ್ತೆ, ಸ್ವಚ್ಚತೆ ಹಾಗೂ ಚರಂಡಿಗಳ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಗ್ರಾಮದಲ್ಲಿ ಚರಂಡಿ, ರಸ್ತೆ ಸೇರಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗ್ರಾಮಸ್ಥರು ದೂರಿದರು.
ಈ ಬಗ್ಗೆ ಖುದ್ದಾಗಿ ಸ್ಥಳ ಪರಿಶೀಲಿಸಿದ ಸಿಇಒ ಅವರು, ಕೊಳಚೆ ನೀರು ಹರಿದು ಹೋಗುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಗ್ರಾಮದ ಗುರುಪಾದೇಶ್ವರ ಮಠದ ಹತ್ತಿರ ಚರಂಡಿ ನೀರನ್ನು ವ್ಯವಸ್ಥಿತವಾಗಿ ಕಳಿಸುವ ಸಲುವಾಗಿ ಚರಂಡಿ ಮತ್ತು ಸಿಸಿ ರಸ್ತೆಗಳನ್ನು ಮನರೇಗಾ ಯೋಜನೆಯಡಿ ಮತ್ತು 15ನೇ ಹಣಕಾಸು ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿ ಮಾಡಲು ಪಿಡಿಒ ರಾಜೇಶ್ವರಿ ದೇವೂರ ಅವರಿಗೆ ಸೂಚಿಸಿದರು.
ಮನರೇಗಾ ತಾಂತ್ರಿಕ ಸಹಾಯಕ ಮಾಂತೇಶ ಕಿಲಾರಟಿ, ತಾಂತ್ರಿಕ ಸಹಾಯಕ ಮಾಂತೇಶ ಪಾಟೀಲ ಅವರು ಸಿಇಒ ಅವರಿಗೆ ಚರಂಡಿ ಮತ್ತು ರಸ್ತೆ ಸುಧಾರಣೆಗೆ ನರೇಗಾ ಯೋಜನೆಯಡಿ ಮಾಡಿದ ಡಿಪಿಆರ್ ಕುರಿತು ವಿವರಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು. ಜೆಜೆಎಂ ಯೋಜನೆಯಡಿ ನೀರಿನ ಸಂಪರ್ಕ ಒದಗಿಸಲು ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್ ಅಂಬರೀಶ ಮೇಲಿನಮನಿ ಅವರಿಗೆ ಸೂಚಿಸಿದರು.
ಸಾಸನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮೂಲಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಆರೋಗ್ಯ ಕೇಂದ್ರದ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಹಾಗೂ ಹೊರರೋಗಿಗಳ ಬೆಡ್ ಮತ್ತು ಔಷಧ ಸಂಗ್ರಹ ಬಗ್ಗೆ ಸಿಎಚ್‌ಒ ಮಹಾಂತೇಶ ಸೋಮನಾಳ ಅವರಿಂದ ಮಾಹಿತಿ ಪಡೆದ ಸಿಇಒ ಅವರು, ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆಯಿಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಮುದಾಯ ಆರೋಗ್ಯ ಅಧಿಕಾರಿ, ಲ್ಯಾಬ್ ಟೆಕ್ನಿಷಿಯನ್, ಆರೋಗ್ಯ ಸಮಾಲೋಚಕರು ಸೇರಿ ಬಹುತೇಕ ಸಿಬ್ಬಂದಿ ಗೈರಾಗಿದ್ದರು. ಈ ಬಗ್ಗೆ ಡಿಎಚ್‌ಒ ಸಂಪತ್‌ಕುಮಾರ ಅವರಿಗೆ ದೂರವಾಣಿ ಕರೆ ಮಾಡಿ ಗೈರಾದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಿದರು.
ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಿದರು.
ತಾಪಂ ಇಒ ನಿಂಗಪ್ಪ ಮಸಳಿ, ಮನರೇಗಾ ಸಹಾಯಕ ನಿರ್ದೇಶಕಿ ಸುಜಾತಾ ಯಡ್ರಾಮಿ, ಬಾಗೇವಾಡಿ ತಾಲೂಕು ಬಿಇಒ ವಸಂತ ರಾಠೋಡ, ತಾಲೂಕು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಆರ್.ಎಸ್.ಹಿರೇಗೌಡರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ದೇವೂರ, ಪಿಆರ್‌ಇಡಿ ಸಹಾಯಕ ಇಂಜಿನಿಯರ್ ವಿಜಯಕುಮಾರ ಇತರರಿದ್ದರು.