ಕ್ರೀಡಾಂಗಣ ಸಮೀಪದ ಖಾಲಿ ಜಾಗಕ್ಕೆ ಕುರಿಸಂತೆ ಸ್ಥಳಾಂತರ

20 HNL
Published on

ಶ್ರೀನಿವಾಸ್ ಟಿ.ಹೊನ್ನಾಳಿ

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪ ಪ್ರತಿ ಬುಧವಾರ ನಡೆಯುತ್ತಿದ್ದ ಕುರಿ ಸಂತೆಯನ್ನು ತಾಲೂಕು ಕ್ರೀಡಾಂಗಣ ಸಮೀಪದ ಖಾಲಿ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಆ ಮೂಲಕ ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ನಾಗರಿಕರಿಗೆ ಆಗುತ್ತಿದ್ದ ತೊಂದರೆ ತಪ್ಪಿಸಿದ್ದಾರೆ.

ಬಸ್​ಸ್ಟ್ಯಾಂಡ್ ಸಮೀಪ ಕುರಿ ಸಂತೆಯಿಂದ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆಗುತ್ತಿದ್ದನ್ನು ನಾಗರಿಕರು ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಶಾಸಕ ಡಿ.ಜಿ.ಶಾಂತನಗೌಡ, ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸಂತೆ ಸ್ಥಳಾಂತರಿಸಿದ್ದಾರೆ.

ತಾಲೂಕು ಕ್ರೀಡಾಂಗಣದ ಬಳಿ ಇರುವ ಖಾಲಿ ಜಾಗ ಕುರಿ ಸಂತೆ ನಡೆಸುವುದಕ್ಕೆ ಸೂಕ್ತ ಸ್ಥಳವಾಗಿದೆ ಎಂದು ನಿರ್ಧರಿಸಿ ಹದಿನೈದು ದಿನಗಳ ಹಿಂದೆ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಗಿತ್ತು. ಬುಧವಾರ ಬೆಳಗಿನ ಜಾವದಿಂದ ಜಿಲ್ಲೆ ಹಾಗೂ ವಿವಿಧ ಜಿಲ್ಲೆಗಳ ಕುರಿ ಮಾರುವವರು ಹೊಸ ಜಾಗದಲ್ಲಿ ಅಧಿಕೃತವಾಗಿ ಕುರಿ ಸಂತೆ ಪ್ರಾರಂಭಿಸಿದ್ದಾರೆ.

ಹೊಸ ಸಂತೆ ಮೈದಾನದಲ್ಲಿ ಮಣ್ಣು ಹಾಕಿಸಿ ಸಮತಟ್ಟು ಮಾಡಿಸಬೇಕು, ಇಲ್ಲಿಯೂ ಕೂಡ ಶಾಲಾ ವಾಹನಗಳು, ಕಾರು, ಬೈಕ್ ಹೆಚ್ಚು ಓಡಾಡುತ್ತವೆ. ಕುರಿ ಮಾರುವ ಹಾಗೂ ಕೊಂಡುಕೊಳ್ಳಲು ಬರುವವರ ವಾಹನಗಳ ನಿಲುಗಡೆಗೆ ಬೇರೆಡೆ ಅವಕಾಶ ಕಲ್ಪಿಸಬೇಕು. ಈ ಬಾರಿ ಕಡು ಬಿಸಿಲು ಇರುವುದರಿಂದ ಶೀಘ್ರವೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಬೇಕು ಎಂದು ಕುರಿ ಸಂತೆಗೆ ಬಂದ ಜನರ ಮನವಿಯಾಗಿದೆ.

ಸದ್ಯ ಹೊಸ ಸಂತೆ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇನ್ನಿತರ ಮೂಲ ಸೌಕರ್ಯ ಒದಗಿಸಲಾಗುವುದು ಎನ್ನುತ್ತಾರೆ ಪುರಸಭೆ ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ.

ಹೊಸ ಸಂತೆ ವೀಕ್ಷಣೆ: ಕುರಿ ಸಂತೆ ಜಾಗೆಯಲ್ಲಿ ಅಗತ್ಯ ಸೌಕರ್ಯ ಬಗ್ಗೆ ಅರಿಯಲು ಪುರಸಭೆ ಅಧ್ಯಕ್ಷ ಮೈಲಪ್ಪ, ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸದಸ್ಯರಾದ ಧರ್ಮಪ್ಪ, ಕೆ.ವಿ. ಶ್ರೀಧರ್, ಮುಖ್ಯಾಧಿಕಾರಿ ಲೀಲಾವತಿ, ಮಾಜಿ ಸದಸ್ಯ ಪೇಟೆ ಪ್ರಶಾಂತ್, ಹಿರಿಯ ಆರೋಗ್ಯ ನಿರೀಕ್ಷಕ ಪರಮೇಶ್​ನಾಯ್್ಕ ಹಾಗೂ ಇತರರು ಭೇಟಿ ನೀಡಿ ವೀಕ್ಷಿಸಿದರು.

ಈಗತಾನೆ ಹೊಸ ಜಾಗದಲ್ಲಿ ಕುರಿ ಸಂತೆ ಪ್ರಾರಂಭವಾಗಿದೆ. ಅದರ ಸಾಧಕ ಬಾಧಕ ನೋಡಿಕೊಂಡು ಶೀಘ್ರವೇ ಎಲ್ಲವನ್ನು ಸರಿಪಡಿಸಲು ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸಿದ್ಧರಿದ್ದಾರೆ. ಅಗತ್ಯ ಮೂಲ ಸೌಕರ್ಯಗಳ ಬಗ್ಗೆ ಶುಕ್ರವಾರ ನಡೆಯುವ ಸಭೆಯಲ್ಲಿ ರ್ಚಚಿಸಿ ತೀರ್ಮಾನ ಕೈಗೊಳ್ಳಲಾಗುವುದು. -ಡಿ.ಜಿ,ಶಾಂತನಗೌಡ, ಶಾಸಕರು.

ಹೊಸ ಜಾಗದಲ್ಲಿ ಪೂರ್ಣ ಪ್ರಮಾಣದ ಸಂತೆ ಪ್ರಾರಂಭವಾಗಲು ಇನ್ನೂ ಕೆಲ ವಾರ ಸಮಯ ತೆಗೆದುಕೊಳ್ಳುತ್ತದೆ. ಸಾಮಾನ್ಯ ನಿಧಿಯಲ್ಲಿ ಅನುದಾನ ಪಡೆದು ಮಣ್ಣು ಹಾಕಿಸಿ ಸಂತೆ ಜಾಗ ಸಮತಟ್ಟು ಮಾಡಿಸಲಾಗುವುದು ಹಾಗೂ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗುತ್ತದೆ. ಮೈಲಪ್ಪ, ಪುರಸಭೆ ಅಧ್ಯಕ್ಷರು, ಹೊನ್ನಾಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net