ಬೆಂಗಳೂರಿನಾಚೆ ಐಟಿ ಅಭಿವೃದ್ಧಿಗೆ ಬೆಂಬಲ,  ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿಕೆ, ಇನ್ಫೋಸಿಸ್ ಡಿಸಿಯಲ್ಲಿ ಅಡ್ವಾನ್ಸ್ ಎಐ ಉದ್ಘಾಟನೆ

IMG_20250806_151226_219.jpg
Published on

ಹುಬ್ಬಳ್ಳಿ: ಇಲ್ಲಿಯ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಎಐ ಲ್ಯಾಬ್ ಆರಂಭಿಸಿರುವುದು ಕರ್ನಾಟಕದಲ್ಲಿ ಬೆಂಗಳೂರಿನಾಚೆ ಮಾಹಿತಿ ತಂತ್ರಜ್ಞಾನ ಹಾಗೂ ಕೈಗಾರಿಕೆ ಬೆಳವಣಿಗೆಯ ಹೆಗ್ಗುರುತು ಹಾಗೂ ಮಹತ್ವದ ಮೈಲುಗಲ್ಲು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅಭಿಪ್ರಾಯಪಟ್ಟರು.

ಇಲ್ಲಿಯ ಗೋಕುಲ ರಸ್ತೆಯಲ್ಲಿರುವ ಇನ್ಫೋಸಿಸ್ ಆವರಣದಲ್ಲಿ ಬುಧವಾರ ಲಿವಿಂಗ್ ಲ್ಯಾಬ್ ಭಾಗವಾಗಿರುವ ಅಭಿವೃದ್ಧಿ ಕೇಂದ್ರದಲ್ಲಿ (ಡಿಸಿ) ಇನ್ಫೋಸಿಸ್ ಸೆಂಟರ್ ಫಾರ್ ಅಡ್ವಾನ್ಸ್ ಎಐ, ಸೈಬರ್ ಸೆಕ್ಯುರಿಟಿ ಆಂಡ್ ಸ್ಪೇಸ್ ಟೆಕ್ನಾಲಾಜಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಕೈಗಾರಿಕೆಗಳ ವಿಕೇಂದ್ರಿಕರಣಕ್ಕೆ ಆದ್ಯತೆ ನೀಡುತ್ತಿದೆ. ಜಾಗತಿಕವಾಗಿ ಬಹುದೊಡ್ಡ ಕಂಪನಿಯಾಗಿರುವ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣಮೂರ್ತಿ, ಸುಧಾ ಮೂರ್ತಿ ಅವರು ಹುಬ್ಬಳ್ಳಿಯವರು, ಇಲ್ಲಿಯ ಇನ್ಫೋಸಿಸ್ ಕ್ಯಾಂಪಸ್ ಅನ್ನು ಇದೀಗ ನೀಡಿರುವ ಸಾವಿರ ಉದ್ಯೋಗಗನ್ನು ಹತ್ತು ಪಟ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಈ ಭಾಗದಲ್ಲಿ ಪ್ರತಿಭಾವಂತರಿದ್ದಾರೆ. ಅವರಿಗೆ ಅವಕಾಶ ನೀಡಬೇಕು. ಹುಬ್ಬಳ್ಳಿ ಕ್ಯಾಂಪಸ್ ಬೆಂಗಳೂರಿಗಿಂತಲೂ ದೊಡ್ಡದಾಗಿ ಬೆಳೆಯಬೇಕು ಎಂದು ಹೇಳಿದರು.

ಐಟಿ ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಇನ್ಫೋಸಿಸ್ ಹುಬ್ಬಳ್ಳಿ ಕ್ಯಾಂಪಸ್ ಅಭಿವೃದ್ಧಿಯಿಂದ ಅದರ ಪ್ರಭಾವ ಉತ್ತರ ಕರ್ನಾಟಕದಾದ್ಯಂತ ಬೀರಲಿದೆ. ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ರಾಜ್ಯ ಸರ್ಕಾರವು ಉದ್ಯಮ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಕಳೆದ ಒಂದು ವರ್ಷದಲ್ಲಿ ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡ ಬೆಳಗಾವಿ ಭಾಗಕ್ಕೆ 23 ಹೊಸ ಕಂಪನಿಗಳು ಬಂದಿವೆ ಎಂದರು.

ಪ್ರತಿಯೊಂದು ಸ್ಟಾರ್ಟ್ ಅಪ್ ಗೆ 50 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಹುಬ್ಬಳ್ಳಿ ಧಾರವಾಡದಲ್ಲೇ 125ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳಿಗೆ ಫಂಡಿಂಗ್ ಮಾಡಲಾಗಿದೆ. ಸ್ಟಾರ್ಟ್ ಅಪ್ ಸೇರಿದಂತೆ ಹಲವು ಸಂಗತಿಗಳಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಕರ್ನಾಟಕವು ಅಕ್ಕಪಕ್ಕದ ರಾಜ್ಯಗಳ ಬದಲಾಗಿ ಚೀನಾ, ವಿಯೆಟ್ನಾಂ ಸೇರಿ ಅಭಿವೃದ್ಧಿ ಹೊಂದಿದ ದೇಶಗಳೊಡನೆ ಸ್ಪರ್ಧೆ ಮಾಡುತ್ತದೆ ಎಂದರು.

ಪ್ರತಿ ವರ್ಷ ರಾಜ್ಯದ ಐಟಿ ರಫ್ತು 4.5 ಲಕ್ಷ ಕೋಟಿ ರೂ.ಗೆ ತಲುಪಿದೆ. ನಮ್ಮ ಮಾನವ ಸಂಪನ್ಮೂಲ ಶಕ್ತಿಯನ್ನು ಯಾವುದೇ ರಾಜ್ಯಕ್ಕೆ ಹೋಲಿಸಲು ಸಾಧ್ಯವಿಲ್ಲ. ಕಳೆದ 30 ವರ್ಷದ ಪ್ರಯತ್ನದ ಫಲವಾಗಿ ಈಗ ಸಾಧನೆ ಸಾಧ್ಯವಾಗುತ್ತಿದೆ. ರಾಜ್ಯವು ಕೌಶಲ ಹಾಗೂ ಜ್ಞಾನದ ರಾಜಧಾನಿಯಾಗಿದೆ. ಉದ್ಯಮ ರಂಗದಲ್ಲಿ ಇಷ್ಟೆಲ್ಲ ಸಾಧನೆ ಮಾಡುತ್ತಿದ್ದರೂ ಸರ್ಕಾರವನ್ನು ಹೀಯಾಳಿಸುವವರು ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ಫೋಸಿಸ್ ಕಾರ್ಯಕಾರಿ ಉಪಾಧ್ಯಕ್ಷ ಸುನೀಲಕುಮಾರ ಧಾರೇಶ್ವರ ಮಾತನಾಡಿ, ಹುಬ್ಬಳ್ಳಿ ಕೇಂದ್ರವು ಇನ್ಫೋಸಿಸ್ ಪ್ರಾದೇಶಿಕ ಸಂಶೋಧನಾ ಹಬ್ ಆಗಿ ಬೆಳೆಯಲಿದೆ. ಸಾವಿರಕ್ಕೂ ಹೆಚ್ಚು ಉದ್ಯೋಗ ನೀಡಲಾಗಿದೆ ಎಂದರು.

ಕಾರ್ಯಕಾರಿ ಉಪಾಧ್ಯಕ್ಷ ರಜನೀಸ್ ಮಾಳವೀಯ ಮಾತನಾಡಿ, ಈ ಭಾಗದಲ್ಲಿ ಅತ್ಯುತ್ತಮ ಶಕ್ತಿ ಇದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ. ಇದೀಗ ಆರಂಭವಾದ ಎಐ ಲ್ಯಾಬ್ ನ್ನು ಇತರ ಕೇಂದ್ರಗಳಿಗೆ ಮಾದರಿಯಾಗಿ ಅಭಿವೃದ್ಧಿ ಪಡಿಸುವ ಉದ್ದೇಶ ಇದೆ. ಹುಬ್ಬಳ್ಳಿ ಡಿಸಿಯಲ್ಲಿ ಕೈಗಾರಿಕೆಗೆ ಸಿದ್ಧ ಪ್ರತಿಭಾವಂತರನ್ನು ರೂಪಿಸುವಲ್ಲಿ ಇನ್ಫೋಸಿಸ್ ತನ್ನ ಬದ್ಧತೆ ಪ್ರದರ್ಶಿಸುತ್ತಿದೆ. ಕೆಎಲ್ಇ ಟೆಕ್ ನಂತಹ ಸ್ಥಳಿಯ ಸಂಸ್ಥೆಗಳೊಂದಿಗೆ ಸಹಭಾಗಿತ್ವದ ಮೂಲಕ ಈ ಪ್ರದೇಶದಲ್ಲಿ ನಾವೀನ್ಯತೆ ಮತ್ತು ಸಹಯೋಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದರು.

ಸಂದೀಪ ಕುಲಕರ್ಣಿ, ಸಿಮ್ರನ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net