ಇನ್ಫೋಸಿಸ್​ ಕ್ರಮ ಸ್ವಾಗತಾರ್ಹ

18 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇನ್ಫೋಸಿಸ್​ ಸಂಸ್ಥೆಯು ಹುಬ್ಬಳ್ಳಿ ಕೇಂದ್ರಕ್ಕೆ ತನ್ನ ಉದ್ಯೋಗಿಗಳನ್ನು ವರ್ಗಾಯಿಸಲು ಮುಂದಾಗಿರುವ ಕ್ರಮ ಸ್ವಾಗತಾರ್ಹ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಂಸ್ಥೆಯು ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸಲು, ವಹಿವಾಟು ವೃದ್ಧಿಸಲು ಎಂದು ರೈತರ ಬೆಲೆ ಬಾಳುವ ಭೂಮಿಯನ್ನು ಇನ್ಫೋಸಿಸ್​ಗೆ ನೀಡಲಾಗಿತ್ತು. ಆದರೆ ಯಾವುದೇ ಚಟುವಟಿಕೆ ನಡೆಸದೆ ಜನರ ನಿರೀಕ್ಷೆ ಹುಸಿಯಾಗಿಸಿತ್ತು. ಇದರಿಂದ ಸ್ಥಳಿಯವಾಗಿ ಆಗುವ ಲಾಭದ ಲಕ್ಷಣಗಳು ಮಾಯವಾದವು. ಹೀಗಾಗಿ ಇನ್ಫೋಸಿಸ್​ ಸಂಸ್ಥೆಯ ಹುಬ್ಬಳ್ಳಿ ಕೇಂದ್ರದ ನಿರ್ಲಕ್ಷ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಈಗ ಕಾರ್ಯ ಆರಂಭ ಮಾಡಲು ಮುಂದಾಗಿರುವುದು ಸಂತಸದ ಸಂಗತಿ.
ಕ್ಷೇತ್ರದ ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದ ಜನರ ಹಿತ ಕಾಯುವುದು ಮತ್ತು ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವುದು ನನ್ನ ಜವಾಬ್ದಾರಿ. ಇದೇ ಕಾರಣಕ್ಕೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡಿದ್ದೆ. ಇದೀಗ ಸಂಸ್ಥೆ ಹೆಚ್ಚಿನ ಭತ್ಯೆಗಳನ್ನು ನೀಡುವ ಭರವಸೆಯೊಂದಿಗೆ ತನ್ನ ಉದ್ಯೋಗಿಗಳನ್ನು ಹುಬ್ಬಳ್ಳಿ ಕೇಂದ್ರಕ್ಕೆ ವರ್ಗ ಮಾಡಲು ತೀರ್ಮಾನಿಸಿರುವುದು ಉತ್ತಮ ಬೆಳವಣಿಗೆ. ಇದರಿಂದ ಈ ಭಾಗದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶ ಹೆಚ್ಚಾಗಲಿದೆ. ಈ ಭಾಗದ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಬೆಲ್ಲದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net