ಮಕ್ಕಳು ಕೇಳಿದ್ದೆಲ್ಲ ಕೊಡಿಸಬೇಡಿ: ಸುಧಾಮೂರ್ತಿ

8 HVR 2 C - Copy
Published on

ಹಾವೇರಿ: ಈಗಿನ ಕಾಲದಲ್ಲಿ ಮಕ್ಕಳನ್ನು ಹೆರುವುದು ಸುಲಭ. ಬೆಳೆಸುವುದು ಕಷ್ಟ. ಮಕ್ಕಳು ಬೇಡಿದ್ದೆಲ್ಲ ಕೊಡಿಸಬೇಡಿ. ಕೇಳಿದ್ದೆಲ್ಲ ಸಿಕ್ಕರೆ ಅದರ ಬೆಲೆ ಅವರಿಗೆ ಅರ್ಥವಾಗುವುದಿಲ್ಲ. ಅಪ್ಪ- ಅಮ್ಮ ಒಂದಾಗಿ ಮಕ್ಕಳನ್ನು ಬೆಳೆಸಬೇಕು. ಊಟ, ಬಟ್ಟೆ ಎಲ್ಲದರಲ್ಲೂ ಇತಿಮಿತಿ ಇರಬೇಕು. ಸ್ನೇಹಿತರಂತೆ ಜತೆಗೆ ಆಟವಾಡಬೇಕು. ಅವರಿಗೆ ಹೆಚ್ಚು ಸಮಯ ಕೊಡಿ. ಹೀಗೆ ಮಾಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾಮೂರ್ತಿ ಹೇಳಿದರು.

ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ವತಿಯಿಂದ ನಗರದ ಶ್ರೀ ಸಿದ್ದೇಶ್ವರ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ವ್ಯಕ್ತಿತ್ವ ವಿಕಸನ’ ಕುರಿತ ವಿಶೇಷ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಾಸ್ಕಾಂ ವರದಿ ಪ್ರಕಾರ ಒಂದು ನೂರು ಇಂಜಿನಿಯರ್ ಪದವೀಧರರಲ್ಲಿ 85 ಪದವೀಧರರು ಕೆಲಸಕ್ಕೆ ಬಾರದವರಾಗಿದ್ದಾರೆ. ಕೇವಲ 15 ಜನ ಮಾತ್ರ ಅರ್ಹರಿದ್ದಾರೆ. ಹಾಗಾಗಿ, ಪದವಿ ಪಡೆದ ಕೂಡಲೇ ಕೆಲಸ ಸಿಗಲ್ಲ. ಅದರ ಜತೆಗೆ ಉತ್ತಮ ಜ್ಞಾನ, ಕೌಶಲ ಬೆಳೆಸಿಕೊಳ್ಳಬೇಕು. ಆರಂಭದಲ್ಲಿ ಸಿಕ್ಕ ಕೆಲಸವನ್ನೇ ಮಾಡಬೇಕು ಎಂದರು.
ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಐಐಟಿ ಓದಿಲ್ಲ. ಆದರೆ, ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಐಐಟಿ ಸೀಟು ಪಡೆಯಬಹುದು. ಒಂದು ವೇಳೆ ಸಿಗದಿದ್ದರೆ ಬೇರೆ ಪ್ರಯತ್ನ ಮಾಡಬೇಕು. ಸಿಕ್ಕಿದ್ದರಲ್ಲೇ ಅದ್ಭುತ ಕೆಲಸ ಮಾಡಬೇಕು. ಎಷ್ಟೋ ಸಲ ನಾವು ಅಂದುಕೊಂಡಿದ್ದು ಆಗಲ್ಲ. ಆದರೆ, ಅಪರಿಮಿತ ಅವಕಾಶಗಳು ಇರುತ್ತವೆ. ಏಕಲವ್ಯ, ಅರ್ಜುನನಂತೆ ಗುರಿ ಬೆನ್ನಟ್ಟಿದರೆ ಮಾತ್ರ ಯಶಸ್ಸು ಸಾಧ್ಯ ಎಂದರು.
ವಂದೇ ಮಾತರಂ ಸ್ವಯಂಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಮಾತನಾಡಿ, ನಮ್ಮ ರಾಜ್ಯ, ದೇಶ ಸಂಕಷ್ಟಕ್ಕೆ ಸಿಲುಕಿದಾಗ ಸುಧಾ ಮೂರ್ತಿ ಅಮ್ಮನವರು ಮೊದಲು ಸಹಾಯಹಸ್ತ ಚಾಚುತ್ತಾರೆ. ಅವರ ಸಾಮಾಜಿಕ ಕಾರ್ಯಗಳಿಂದ ನಾನೂ ಸ್ಪೂರ್ತಿ ಪಡೆದುಕೊಂಡಿದ್ದೇನೆ ಎಂದರು.
ಉಪನ್ಯಾಸಕ ಪ್ರಮೋದ ನಲವಾಗಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ನಗರ ಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಡಾ.ಸುನಂದಾ ಕುಲಕರ್ಣಿ, ನಗರ ಸಭೆ ಸದಸ್ಯರಾದ ಸವಿತಾ ಹೆದ್ದೇರಿ, ದೀಪಾ ಅಡ್ಮನಿ, ಜಯಶ್ರೀ ಪೀಸೆ, ಮತ್ತಿತರರು ಉಪಸ್ಥಿತರಿದ್ದರು. ಸುಧಾ ಹಿರೇಮರದ ಪ್ರಾರ್ಥಿಸಿದರು. ಪ್ರೇಮಕುಮಾರ ಸ್ವಾಗತಿಸಿದರು. ಪ್ರಭುಲಿಂಗ ಕೋಡದ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net