ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾಹಿತಿ ತಂತ್ರಜ್ಞಾನ ಪೂರಕ: ಶಾಸಕ ಜಿ.ಡಿ.ಹರೀಶ್‌ಗೌಡ

12
Published on

ಮೈಸೂರು: ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಲದಿಂದ ಕ್ರೆಸ್ಟ್ ಇನ್ಫೋ ಮೀಡಿಯಾ ಸಹಯೋಗದಲ್ಲಿ ನಗರದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

ದಕ್ಷಿಣ ಭಾರತ ನಗರ ಸಹಕಾರಿ ಬ್ಯಾಂಕಿಂಗ್ ಶೃಂಗಸಭೆಯನ್ನು ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾಹಿತಿ ತಂತ್ರಜ್ಞಾನ ಮಹತ್ವದ್ದಾಗಿದೆ. ದೇಶದ ಎಲ್ಲೋ ಮೂಲೆಯಲ್ಲಿರುವ ಶಾಖಾ ಕಚೇರಿಯ ವಹಿವಾಟನ್ನು ಡಾಟಾ ಮೂಲಕ ತಿಳಿದುಕೊಳ್ಳುವ ವ್ಯವಸ್ಥೆ ಇದೆ ಎಂದರು.

ಬ್ಯಾಂಕ್‌ನಲ್ಲಿ 650 ಕೋಟಿ ರೂ. ಇದ್ದ ಠೇವಣಿ ನನ್ನ ಅವಧಿಯಲ್ಲಿ ಸಾವಿರ ಕೋಟಿ ದಾಟಿತು. ಎರಡು ಜಿಲ್ಲೆಯ 1.50 ಲಕ್ಷ ರೈತರಿಗೆ 1600 ಕೋಟಿಯ ರೂ. ಬಡ್ಡಿ ರಹಿತ ಸಾಲ ನೀಡಲಾಗಿದೆ. ಯಾವುದೇ ಬ್ಯಾಂಕ್ ಗ್ರಾಹಕರ ನಂಬಿಕೆಯನ್ನು ಕಳೆದುಕೊಂಡರೆ ಚೇತರಿಸಿಕೊಳ್ಳುವುದು ಕಷ್ಟಸಾಧ್ಯ. ಆದ್ದರಿಂದ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಸಾಲವನ್ನು ಜನರಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಸುಲಭವಾಗಿ ನೀಡುವ ಮೂಲಕ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ ಎಂದರು.

ರಾಜ್ಯ ಪಟ್ಟಣ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್‌ಬಿಎಂ ಮಂಜು ಮಾತನಾಡಿ, ನಮ್ಮ ರಾಜ್ಯದಲ್ಲಿ ಸಹಕಾರ ಚಳವಳಿಯ ಬೆಳವಣಿಗೆಗೆ ಸಹಕಾರಿ ಭೀಷ್ಮ ಎಂದು ಹೆಸರು ಪಡೆದಿದ್ದ ಎಸ್.ಎಸ್. ಪಾಟೀಲ ಅವರನ್ನು ಸಹಕಾರಿ ಬ್ಯಾಂಕುಗಳು ಸದಾ ಸ್ಮರಸಬೇಕು. ಕಾನೂನು ಸಚಿವರಾಗಿರುವ ಎಚ್.ಕೆ. ಪಾಟೀಲ್ ಅವರು ಬ್ಯಾಂಕುಗಳ ಉಳಿವಿಗಾಗಿ ಸಹಕಾರಿ ಕಾಯ್ದೆಗಳ ತಿದ್ದುಪಡಿಯ ಮೂಲಕ ಕಾನೂನಿನ ಶಕ್ತಿಯನ್ನು ನೀಡಿ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.

ರಾಜ್ಯ ಪಟ್ಟಣ ಸಹಕಾರ ಮಹಾಮಂಡಳ ನಿರ್ದೇಶಕರಾದ ಬಿ.ಕೋದಂಡರಾಮು, ವೀರಮ್ಮ, ಎಂ.ಬಿ.ಮಂಜೇಗೌಡ, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಜೆ. ಯೋಗೇಶ್, ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಮಂಜುಳಾ ಮಾನಸ, ಮರ್ಚೆಂಟ್ ಬ್ಯಾಂಕ್ ಉಪಾಧ್ಯಕ್ಷ ಮಹೇಶ್, ಕನ್ಯಕಾಪರಮೇಶ್ವರಿ ಬ್ಯಾಂಕ್ ಅಧ್ಯಕ್ಷ ಸಂದೀಪ್, ಮುಸ್ಲಿಂ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಶೌಕತ್ ಪಾಷಾ, ಗ್ರಾಜುಯೇಟ್ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ, ನವನಗರ ಬ್ಯಾಂಕ್ ಅಧ್ಯಕ್ಷ ಬಸಂತ್ ನಂಜಪ್ಪ, ಕೆ. ಆರ್. ಬ್ಯಾಂಕ್ ಅಧ್ಯಕ್ಷ ಬಸಪ್ಪ, ಮಾಜಿ ಅಧ್ಯಕ್ಷ ಎಚ್.ವಾಸು, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಟಿ.ರವಿ, ನಿರ್ದೇಶಕರಾದ ಪಡುವಾರಹಳ್ಳಿ ಎಂ. ರಾಮಕೃಷ್ಣ, ಎನ್. ಯೋಗಾನಂದ್, ಆರ್. ಸೋಮಣ್ಣ, ಹರೀಶ್, ಎಂ. ಶಿವಪ್ರಕಾಶ್, ಪಿ.ಗೀತಾ, ಲಕ್ಷ್ಮೀ ದಿನೇಶ್, ಎಸ್.ಆರ್. ಸುನೀಲ್, ವೆಂಕಟೇಶ, ಕೃಷ್ಣಪ್ರಸಾದ್, ಸುಷ್ಮಾ, ಮಹಾಮಂಡಳ ಉಪ ಕಾರ್ಯನಿರ್ವಾಹಕ ಅನಿಲ್ ಕೆರೋಸು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net