

ವಿಜಯಪುರ : ರೈತರಿಗೆ ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ಹಾಗೂ ಮುಂಗಾರು ಹಂಗಾಮಿನ ಬೆಳೆಗಳ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ನಗರ ಹೊರವಲಯದ ಐಸಿಎಆರ್ ಹಿಟ್ಟಿನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಗುರುವಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಇಡೀ ದೇಶದಲ್ಲಿರುವ ಎಲ್ಲ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಜರುಗುತ್ತಿದೆ. ಅಭಿಯಾನವು ವಿಜ್ಞಾನಿಗಳನ್ನೊಳಗೊಂಡ ವಿವಿಧ ತಂಡಗಳ ಜತೆಗೆ ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಇಲಾಖೆಗಳ ಸಹಯೋಗದಿಂದ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಸಕ್ತ ಮುಂಗಾರು ಹಂಗಾಮು ಆರಂಭವಾಗಿದೆ. ಅಭಿಯಾನದಲ್ಲಿ ರೈತರಿಗೆ ಆಧುನಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡುವುದು, ಅವರಿಗೆ ಪ್ರಯೋಜನಕಾರಿಯಾಗುವ ವಿವಿಧ ಸರ್ಕಾರಿ ಯೋಜನೆಗಳು ಮತ್ತು ನೀತಿಗಳ ಕುರಿತು ಮಾಹಿತಿ ತಿಳಿಸುವುದು, ಮಣ್ಣು ಮತ್ತು ನೀರು ಪರೀಕ್ಷೆ, ಮತ್ತು ಮಣ್ಣಿನ ಆರೋಗ್ಯ ಕಾರ್ಡ್ ಬಳಕೆ ಕುರಿತು ಪ್ರಚಾರ ಮಾಡುವುದು, ರಾಸಾಯನಿಕ ಗೊಬ್ಬರಗಳ ವಿವೇಚಾನಾಯುಕ್ತ ಮತ್ತು ಸೂಕ್ತ ಬಳಕೆ ಬಗ್ಗೆ ಜಾಗ್ರತೆ ಮೂಡಿಸಲಾಗುವುದೆಂದು ತಿಳಿಸಿದರು.
ಅಭಿಯಾನದ ಭಾಗವಾಗಿ ಕ್ಷೇತ್ರ ಮಟ್ಟದ ಅವಿಷ್ಕಾರಗಳ ಬಗ್ಗೆ ಪ್ರತಿ ರೈತನಿಂದ ಪ್ರತಿಕ್ರಿಯೆ ಸಂಗ್ರಹಿಸಿ ಮತ್ತು ಅದಕ್ಕೆ ಅನುಗುಣವಾಗಿ ಸಂಶೋಧನೆ ಸಿದ್ಧಪಡಿಸಲಾಗುವುದೆಂದು ತಿಳಿಸಿದರು.
ಹಿರಿಯ ವಿಜ್ಞಾನಿ ಡಾ. ಎಸ್.ಎಂ. ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯ ಡಾ. ಲಕ್ಷ್ಮಣ ಹುಣಶೀಕಟ್ಟಿ, ಜಗದೀಶ ಪಾಟೀಲ, ಶಿಲ್ಪಾ ಚೋಗಟಾಪೂರ, ವಿಜಯಲಕ್ಷ್ಮೀ ಮುಂದಿನಮನಿ, ಕಿರಣಸಾಗರ ಡಿ.ಸಿ., ಶಿವರಾಜ ಕಾಂಬಳೆ, ಸುರೇಶ ಉಳ್ಳಾಗಡ್ಡಿ, ಶೋಭಾ, ಸಹನಾ ಪಾಟೀಲ ಮತ್ತಿತರರಿದ್ದರು.