

ಅಳವಂಡಿ: ಗ್ರಾಮದ ಬಾಂಧವ್ಯ ಸಂಜೀವಿನಿ ಒಕ್ಕೂಟದ ಕಚೇರಿಯಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಬೆಳೆ ಸಮೀಕ್ಷೆದಾರರಿಗೆ ಮಾಹಿತಿ ಸಭೆ ಶುಕ್ರವಾರ ನಡೆಯಿತು.
ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರ ಮಾತನಾಡಿ, ಬೆಳೆ ಸಮೀಕ್ಷೆದಾರರು ರೈತರ ಮೊಬೈಲಿನಲ್ಲಿ ಬೆಳೆ ಸಮೀಕ್ಷೆ ಆ್ಯಪ್ ಡೌನ್‌ಲೋಡ ಮಾಡಲು ತಿಳಿಸಬೇಕು. ಅವರ ಜಮೀನಿನಲ್ಲಿಯ ಬೆಳೆಯನ್ನು ಅವರೇ ಸಮೀಕ್ಷೆ ಮಾಡುವ ಬಗ್ಗೆ ಮಾಹಿತಿ ನೀಡಬೇಕು. ಇದರಿಂದ ಬೆಳೆ ಸಾಲ, ಸರ್ಕಾರದ ಬೆಂಬಲ ಬೆಲೆ ಯೋಜನೆ, ಬೆಳೆವಿಮೆ, ಪಹಣಿಯಲ್ಲಿ ಬೆಳೆ ನೋಂದಾಯಿಸಲು ಸಹಕಾರಿಯಾಗಲಿದೆ ಎಂದರು.
ಕಂದಾಯ ನಿರೀಕ್ಷಕ ಸುರೇಶ ಹಂದ್ರಾಳ ಮಾತನಾಡಿ, ನಿಗದಿತ ಸಮಯದಲ್ಲಿ ಬೆಳೆ ಸಮೀಕ್ಷೆ ಕಾರ್ಯ ಮುಗಿಸಬೇಕು. ಈ ಬಗ್ಗೆ ಗ್ರಾಮ ಆಡಳಿತ ಅಧಿಕಾರಿಗಳು, ಖಾಸಗಿ ಬೆಳೆ ಸಮೀಕ್ಷೆದಾರರು ಜಾಗೃತಿ ಮೂಡಿಸಬೇಕು ಎಂದರು. ನಂತರ ಖಾಸಗಿ ಬೆಳೆ ಸಮೀಕ್ಷೆದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು.