

ಚಿಕ್ಕೋಡಿ: ಡಿಜಿಟಲೈಜೇಷನ್ ಸಾರ್ವಜನಿಕ ಕ್ಷೇತ್ರದಲ್ಲಿ ತುಂಬ ಬದಲಾವಣೆ ತಂದಿದೆ. ಅಧಿಕಾರಿಗಳು ಸಹಿತ ವಿಳಂಬ ಮಾಡದೆ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಹೇಳಿದರು.
ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿಶ್ವವಿದ್ಯಾಲಯ, ಇನ್‌ಸ್ಟಿಟ್ಯೂಟ್ ಆಪ್ ಎಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿರ‍್ಸ ಸಹಭಾಗಿತ್ವದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಇನ್ವೆಂಟ್ರಾ-೨ಕೆ೨೫, ೨೪ ಗಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಗ್ರಂಥಾಲಯದಿಂದ ಪುಸ್ತಕ ಪಡೆದು ಓದುವುದೇ ಕಷ್ಟವಾಗಿತ್ತು, ಆದರೆ ಇಂಟರ್ನೆಟ್ ಯುಗದಲ್ಲಿ ಎಲ್ಲ ಮಾಹಿತಿ ಪಡೆದುಕೊಳ್ಳಬಹುದು ಎಂದರು.
ಪ್ರಾಚಾರ್ಯ ಡಾ.ಪ್ರಸಾರ ರಾಂಪುರೆ ಮಾತನಾಡಿ, ವಿದ್ಯಾರ್ಥಿಗಳಿಗೆ ಸೃಜನಶೀಲತೆ, ತಾಂತ್ರಿಕ ಜ್ಞಾನ, ಸಹಯೋಗ, ನಾವಿನ್ಯತೆ ಪ್ರದರ್ಶಿಸಲು, ತಮ್ಮ ಕೌಶಲ ವ್ಯಕ್ತಪಡಿಸಲು ಹಾಗೂ ನೈಜ ಪ್ರಪಂಚದ ಸವಾಲುಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ಕಂಡುಹಿಡಿಯಲು ಒಂದು ಉತ್ತಮ ವೇದಿಕೆಯಾಗಿದೆ ಎಂದರು.
ಕರ್ನಾಟಕ, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಿಂದ ೩೦೫ ತಂಡಗಳ ಪೈಕಿ, ೧೨೫ ಆಯ್ಕೆಯಾಗಿದ್ದು, ಅವುಗಳಲ್ಲಿ ೧೦೨ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ತಹಸೀಲ್ದಾರ್ ರಾಜೇಶ ಬುರ್ಲಿ, ಡಾ.ವೀರಣ್ಣ ಮೋದಿ, ಡಾ.ಜಗನ್ನಾಥ ಜಾಧವ, ಡಾ.ಸಚಿನ ಮೆಕ್ಕಳಕಿ, ಡಾ.ಸಂಜಯ ಹನಗಂಡಿ, ಡಾ.ಸಂಜಯ ಪೂಜಾರಿ, ಸುನೀಲ ಶಿಂಧೆ, ಸಂಗೀತಾ ವಾಟೆಗಾಂವಕರ, ಪ್ರದೀಪ ಹೊದ್ಲೂರ ಇತರರಿದ್ದರು. ಸಂಯೋಜಕರಾದ ಡಾ.ಬಾಹುಬಲಿ ಅಕಿವಾಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸಂಜಯ ಅಂಕಲಿ ಸ್ವಾಗತಿಸಿದರು. ಡಾ.ಸುನೀಲ ಹೆಬ್ಬಾಳೆ ಪರಿಚಯಿಸಿದರು. ಸಂಜು ಕಪಲಿ ವಂದಿಸಿದರು.