ಸ್ಕೌಟ್ಸ್-ಗೈಡ್ಸ್ ಸೇರಲು ಪ್ರೇರೇಪಿಸಿ

Dbp6
ದೊಡ್ಡಬಳ್ಳಾಪುರದ ಅನಿಬೆಸೆಂಟ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ಮಾಹಿತಿ ಶಿಬಿರ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಇತ್ತೀಚಿನ ವರ್ಷಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಧರ್ಮದ ಆಧಾರದಲ್ಲಿ ಮಕ್ಕಳ ಗುಂಪುಗಳಾಗುತ್ತಿದೆ. ಇದು ದೇಶಕ್ಕೂ ಒಳಿತಲ್ಲ, ಜೀವನಕ್ಕೂ ಒಳ್ಳೆಯದಲ್ಲ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ನಗರದ ಡಾ.ಅನಿಬೆಸೆಂಟ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಬಿಇಒ, ಕ್ಷೇತ್ರ ಸಮನ್ವಯಾಧಿಕಾರಿ, ದೈಹಿಕ ಶಿಕ್ಷಕರು, ಸಿ.ಆರ್.ಪಿ, ಬಿ.ಆರ್.ಪಿಗಳಿಗೆ ಆಯೋಜಿಸಿದ್ದ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
ಎಲ್ಲ ಧರ್ಮಗಳು ಸತ್ಯವಂತರಾಗಿರಬೇಕು, ದಯವಂತರಾಗಿರಬೇಕೆಂದು ಹೇಳುತ್ತದೆ. ನಾನು 30-35 ವರ್ಷಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಇಲ್ಲಿ ಯಾರ ಜಾತಿಯನ್ನೂ ಕೇಳುವುದಿಲ್ಲ. ಧರ್ಮ ಕೇಳುವುದಿಲ್ಲ. ಎಲ್ಲರನ್ನು ಸಮಾನವಾಗಿ ನೋಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳಿಗೆ ಮನುಷ್ಯರಾಗಿರುವುದನ್ನು ಕಲಿಸಬೇಕಿದೆ. ಎಲ್ಲ ಶಾಲೆಗಳಲ್ಲೂ ಸ್ಕೌಟ್ಸ್ ಗೈಡ್ಸ್ ಯೂನಿಟ್‌ಗಳನ್ನು ಸ್ಥಾಪಿಸಲು ಶಿಕ್ಷಕರು ಮಕ್ಕಳನ್ನು ಪ್ರೇರೇಪಿಸಬೇಕು. ಕೆಲವರು ಆಕಸ್ಮಿಕವಾಗಿ ಶಿಕ್ಷಕರಾಗುತ್ತಾರೆ. ಕೆಲವರು ಶಿಕ್ಷಕರೇ ಆಗಬೇಕೆನ್ನುವ ಹಂಬಲದೊಂದಿಗೆ ಈ ವೃತ್ತಿಗೆ ಆಗಮಿಸುತ್ತಾರೆ. ಶಿಕ್ಷಕರಿಂದಷ್ಟೇ ದೇಶ ಕಟ್ಟುವ ಕೆಲಸವನ್ನು ಮಾಡಬಹುದಾಗಿದೆ ಎಂದರು.

ಮಕ್ಕಳಿಗೆ ಸಂಸ್ಕಾರ ಕಲಿಸಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ, ದೇಶಭಕ್ತಿ, ಸಂಸ್ಕಾರಗಳನ್ನು ಕಲಿಸಬೇಕು. ನೀರಿನ ರಕ್ಷಣೆ, ತ್ಯಾಜ್ಯ ನಿರ್ವಹಣೆ, ದೇಶದ ಸಮಸ್ಯೆ, ಆರೋಗ್ಯ ಕಾಳಜಿ ಬಗ್ಗೆ ಜಾಗೃತಿ ಮೂಡಿಸಬೇಕು. ಮಕ್ಕಳು ಕೌಶಲ್ಯಯುತ ಚಟುವಟಿಕೆಗಳನ್ನು ಕಲಿಯಬೇಕು ಎಂದು ಡಿಡಿಪಿಐ ಕೃಷ್ಣಮೂರ್ತಿ ಹೇಳಿದರು. ಸಮಾಜದಲ್ಲಿ ಹಿರಿಯರಿಗೆ ಗೌರವಿಸುವ ಸಂಸ್ಕಾರ, ನಾಯಕತ್ವ ಗುಣವನ್ನು ಮಕ್ಕಳಲ್ಲಿ ಬೆಳೆಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕ್ರಮಗಳು ಬದುಕಿಗೆ ಮಾರ್ಗದರ್ಶನ ಕಲಿಸಿಕೊಡುತ್ತದೆ. ಈ ರೀತಿಯ ಶಿಬಿರಗಳಿಂದ ಸಾಕಷ್ಟು ಅಂಶಗಳನ್ನು ಕಲಿಯಬಹುದಾಗಿದೆ. ಕೌಶಲಗಳ ಕಲಿಕೆಯಿಂದ ಬದುಕಿನಲ್ಲಿ ಯಶಸ್ಸು ಸಾಧ್ಯ. ಉತ್ತಮ ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ, ಬಾಲ್ಯವಿವಾಹದ ಬಗ್ಗೆ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳನ್ನು ಮಕ್ಕಳು ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದ್ದು, ಅದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net