

ಜಗಳೂರು: ಗುಣಮಟ್ಟದ ಆಧಾರದಲ್ಲಿ ತರಕಾರಿಗಳನ್ನು ವರ್ಗೀಕರಿಸಿ ಮಾರಾಟ ಮಾಡುವುದರಿಂದ ಹೆಚ್ಚಿನ ಬೆಲೆ ನಿರೀಕ್ಷಿಸಬಹುದು ಎಂದು ವಿಜ್ಞ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ನಿಬಗೂರು ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಈರುಳ್ಳಿಯಲ್ಲಿ ಭೀಮಾ ಡಾರ್ಕ್ ರೆಡ್ ತಳಿಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.
ಪ್ರಸ್ತುತ ವರ್ಷ ಅತಿ ಹೆಚ್ಚು ಮಳೆಯಿಂದಾಗಿ ಈರುಳ್ಳಿಯಲ್ಲಿ ನೇರಳೆ ಎಲೆ ಮಚ್ಚೆ ರೋಗದ ಬಾಧೆ ತೀವ್ರವಾಗಿದ್ದು, ಗಡ್ಡೆಗಳ ಬೆಳೆವಣಿಗೆ ಕುಂಠಿತವಾಗಿದೆ. ಆದರೆ, ಪ್ರಾತ್ಯಕ್ಷಿಕೆ ತಾಕುಗಳಲ್ಲಿ ಹಮ್ಮಿಕೊಂಡ ವೈಜ್ಞಾನಿಕ ನಿರ್ವಹಣಾ ಕ್ರಮಗಳಾದ ಟ್ರೈಕೋಡರ್ಮಾ ಬೀಜೋಪಚಾರ, ಲಘು ಪೋಷಕಾಂಶ ಬಳಕೆ ಹಾಗೂ ಅಗತ್ಯ ಸಸ್ಯ ಸಂರಕ್ಷಣಾ ಕ್ರಮಗಳಿಂದ ಬೆಳೆ ಉತ್ತಮವಾಗಿ ಬಂದಿದೆ ಎಂದು ಹೇಳಿದರು.
ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಅವಿನಾಶ್ ಟಿ.ಜಿ. ಮಾತನಾಡಿ, ರೈತರು ಈಗ ಬೆಳೆದಿರುವ ಈರುಳ್ಳಿ ಕೂಳೆಯಲ್ಲಿ ಮತ್ತೆ ಈರುಳ್ಳಿ ಬೆಳೆಯದೇ ಯಾವುದಾದರೊಂದು ದ್ವಿದಳ ಧಾನ್ಯದ ಬೆಳೆ ಬೆಳೆಯುವುದರಿಂದ ಮಣ್ಣು ಫಲವತ್ತತೆಯಾಗುವ ಜತೆಗೆ ರೋಗ ರುಜಿನ ಕಡಿಮೆಯಾಗುತ್ತವೆ ಎಂದು ತಿಳಿಸಿದರು.
ಗ್ರಾಮದ ರೈತರಾದ ನಾಗರಾಜ್, ತಮ್ಮ ಬೆಳೆಯ ಅನುಭವ ಹಂಚಿಕೊಂಡರು. ಬಿದರಕೆರೆ ರೈತ ಉತ್ಪಾದಕ ಕಂಪನಿ ನಿರ್ದೇಶಕ ರೇವಣಸಿದ್ದಪ್ಪ, ರೈತರಾದ ಗುರುಸಿದ್ದಪ್ಪನಗೌಡ, ವೀರೇಶ್, ಪ್ರವೀಣ, ಕಲ್ಲೇಶ್, ಗುರುಸಿದ್ದಪ್ಪ, ಶರಣಪ್ಪ ಇತರರು ಹಾಜರಿದ್ದರು.