ಜನರಿಗೆ ಭ್ರಷ್ಟಾಚಾರ ತಿಳಿಸಲು ವೇದಿಕೆ ನಿರ್ಮಾಣ

1674050465566 (1)04
Published on

ಚಿತ್ರದುರ್ಗ: ಕ್ಷೇತ್ರದ ಶಾಸಕರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಮಾಡಿರುವ ಭೂ ಮಾಫಿಯಾ, ಆಶ್ರಯ ಮನೆ ಒಳಗೊಂಡು ಪ್ರತಿ ಹಗರಣವನ್ನು ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈವರೆಗೂ ಮಾಡಿರುವ ಹಗರಣ ಒಂದು ದಿನದಲ್ಲಿ ಹೇಳಲು ಸಾಧ್ಯವಿಲ್ಲ. ನೂರು ದಿನ ಹೇಳಿದರೂ ಸಾಲದು. ಅದಕ್ಕಾಗಿ ಕ್ಷೇತ್ರದ ಜನರಿಗೆ ಹಂತ-ಹಂತವಾಗಿ ತಿಳಿಸಲು ವೇದಿಕೆ ನಿರ್ಮಿಸಲಾಗುತ್ತಿದೆ. ಇದು ಭ್ರಷ್ಟಾಚಾರ ವಿರುದ್ಧದ ಹೋರಾಟವಾಗಿದ್ದು, ಪಕ್ಷಾತೀತವಾಗಿ ಯಾರೂ ಬೇಕಾದರೂ ವೇದಿಕೆ ಸೇರಬಹುದು ಎಂದು ಆಹ್ವಾನಿಸಿದರು.

ಭ್ರಷ್ಟಾಚಾರ ಮಾಡಲು ಉಳಿದವರಿಗೆ ತಿಪ್ಪಾರೆಡ್ಡಿ ಅವಕಾಶವನ್ನೇ ನೀಡಿಲ್ಲ. ಕಾಮಗಾರಿಗಳಲ್ಲಿ ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಪರ್ಸೆಂಟೇಜ್ ಪಡೆದಿದ್ದಾರೆ. ಈ ರೀತಿಯ ಚಟುವಟಿಕೆ ಮೂಲಕ ದುಂಡಗಾಗುವಲ್ಲಿ ನಿಸ್ಸೀಮರು ಎಂದರು.

ಗುತ್ತಿಗೆದಾರರೊಬ್ಬರು ಇವರ ಕುರಿತು ಬೆಂಗಳೂರಿನಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಶಾಸಕರ ವಿರುದ್ಧ ಯಾರೇ ದನಿ ಎತ್ತಿದರೂ ಅವರ ಮನೆಗೆ ತಲುಪುವ ಮೂಲ ಸೌಕರ್ಯಗಳೆಲ್ಲವೂ ಬಂದ್ ಆಗುತ್ತವೆ. ಹೀಗಾಗಿ ಜನ ಮೌನಕ್ಕೆ ಜಾರಿದ್ದಾರೆ. ಹಗರಣಗಳನ್ನು ಬಿಚ್ಚಿಡುವುದು ಇಲ್ಲಿಯ ಪ್ರಜೆಯಾಗಿ ನನ್ನ ಕರ್ತವ್ಯವಾಗಿದ್ದು, ಗುರಿ ಕೂಡ ಆಗಿದೆ. ಗುತ್ತಿಗೆದಾರರ ಬೆನ್ನೆಲುಬಿಗೆ ನಿಲ್ಲುತ್ತೇನೆ ಎಂದು ತಿಳಿಸಿದರು.

ಯಾವುದೇ ತನಿಖೆ ನಡೆಸುವಂತೆ ನಾನೂ ಸರ್ಕಾರಕ್ಕೆ ಒತ್ತಾಯಿಸುವುದಿಲ್ಲ. ಏಕೆಂದರೆ ತನಿಖಾ ಸಂಸ್ಥೆಗಳ ಮೇಲೆ ವಿಶ್ವಾಸ ಇಲ್ಲವಾಗಿದೆ. ಕ್ಲೀನ್ ಚಿಟ್ ಪಡೆಯುವಲ್ಲಿಯೂ ಸಫಲರಾಗಲಿದ್ದಾರೆ. ಅದರಲ್ಲಿ ಯಾವ ಅನುಮಾನವೂ ಬೇಡ. ಆ ಸಾಮರ್ಥ್ಯ ಶಾಸಕರಿಗಿದೆ ಎಂದರು.

ಶಾಸಕರು ಸಾಕ್ಷಿ ಕೇಳುತ್ತಿದ್ದು, ಸಾರ್ವಜನಿಕರ ಸಮ್ಮುಖದಲ್ಲಿಯೇ ಪ್ರತ್ಯಕ್ಷವಾಗಿ ಎಲ್ಲೆಲ್ಲಿ ಕಾಮಗಾರಿ ಕಳಪೆಯಾಗಿವೆ ಎಂಬುದನ್ನು ಶೀಘ್ರವೇ ಬಹಿರಂಗಪಡಿಸಲಾಗುವುದು.

ಗ್ರಾಫ್ ಮೀರಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ರಾಜ್ಯದಲ್ಲೇ ಇಂತಹ ಶಾಸಕರನ್ನು ಎಲ್ಲಿಯೂ ನೋಡಲು ಸಾಧ್ಯವಿಲ್ಲ ಎಂದು ದೂರಿದರು. ಮಗನನ್ನು ಎಂಬಿಬಿಎಸ್ ಓದಿಸಿದ್ದು, ವೈದ್ಯರನ್ನಾಗಿ ಮಾಡುವ ಬದಲು ಕ್ಲಾಸ್ ಒನ್ ಗುತ್ತಿಗೆದಾರನನ್ನಾಗಿ ಮಾಡಿ, ಹಲವು ಕಾಮಗಾರಿಗಳ ಪರವಾನಗಿ ಪಡೆದು ಕೆಲಸ ಮಾಡಿಸುತ್ತಿದ್ದಾರೆ. ಜನಪರ ಕಾಳಜಿ ಎನ್ನುತ್ತಾರೆ, ಅದು ಇದ್ದಿದ್ದರೆ, ದೊಡ್ಡ ಆಸ್ಪತ್ರೆ ನಿರ್ಮಿಸಿ ಬಡವರಿಗೆ ಉಚಿತ ಚಿಕಿತ್ಸಾ ಸೌಲಭ್ಯ ನೀಡಬಹುದಿತ್ತಲ್ಲ ಎಂದು ಕಾಂತರಾಜ್ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net