

ಮೈಸೂರು: ರಾಜ್ಯದಲ್ಲಿ ಈಗ ಪ್ರಬಲವಾಗಿ ಬೆಳೆದಿರುವ ಒಕ್ಕಲಿಗರ ಸಂಘ ಅಸ್ತಿತ್ವಕ್ಕೆ ಬರಲು ಸ್ವಾಮಿ ವಿವೇಕಾನಂದರ ಪ್ರೇರಣೆಯೂ ಕಾರಣ ಎಂದು ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಷಿಕಾಗೋ ಸರ್ವಧರ್ಮ ಸಮ್ಮೇಳನ ಮುಗಿಸಿಕೊಂಡು ಚೆನ್ನೈಗೆ ಬಂದು ಪ್ರವಚನ ನೀಡುತ್ತಿದ್ದ ಸ್ವಾಮಿ ವಿವೇಕಾನಂದರನ್ನು ಮುಖಂಡ ಕೆ.ಎಚ್.ರಾಮಯ್ಯ ಭೇಟಿ ಮಾಡಿ ಸಂದೇಶ ಕೇಳಿದರು. ಆಗ ವಿವೇಕಾನಂದರು ಇಡೀ ಸಮಾಜಕ್ಕೆ ಸೇವೆ ಮಾಡುವ ಬದಲು ನಿಮ್ಮ ಸಮುದಾಯಕ್ಕೆ ಏನನ್ನಾದರೂ ಮಾಡಿ ಎಂದು ಸಲಹೆ ನೀಡಿದ್ದರು. ಅದರಂತೆ ಬೆಂಗಳೂರಿಗೆ ಬಂದು ಕೇಂದ್ರ ಒಕ್ಕಲಿಗರ ಸಂಘ ಸ್ಥಾಪನೆಗೆ ಕೆ.ಎಚ್.ರಾಮಯ್ಯ ನಾಂದಿ ಹಾಡಿದರು. ಬಳಿಕ ಹಲವು ಸಂಘ, ಸಂಸ್ಥೆಗಳನ್ನು ಕಟ್ಟಿದರು ಎಂದು ಸ್ಮರಿಸಿದರು.
ಮೈಸೂರಿನ ಆಶ್ರಯದಲ್ಲಿ ಇದ್ದಾಗ ರಾಜರೊಂದಿಗೆ ಸ್ವಾಮಿ ವಿವೇಕಾನಂದರು ಚಾಮುಂಡಿಬೆಟ್ಟಕ್ಕೆ ತೆರಳಿದ್ದರು. ಕೆಂಪೇಗೌಡರು ಭೈರವಿ ರಾಗದಲ್ಲಿ ಹಾಡುತ್ತಿದ್ದರು. ಅದನ್ನು ಕಂಡು ಕೆಲಕಾಲ ನಿಂತ ಸ್ವಾಮಿ ವಿವೇಕಾನಂದರು, ಇವರನ್ನು ಪೋಷಿಸಿ ಮೈಸೂರು ರಾಜ್ಯಕ್ಕೆ ರತ್ನವಾಗುತ್ತಾರೆ ಎಂದು ಆಶೀರ್ವದಿಸಿದ್ದರು. ಅದರಂತೆ ಕೆಂಪೇಗೌಡರು ಬಳಿಕ ‘ಭೈರವಿ ಕೆಂಪೇಗೌಡ’ ಎಂದೇ ಪ್ರಖ್ಯಾತಿಯಾದರು ಎಂದು ಸ್ವಾಮೀಜಿ ವಿವರಿಸಿದರು.