ಬದಲಾದ ಜೀವನ ಶೈಲಿಯಿಂದ ಮಹಿಳೆಯರಲ್ಲಿ ಬಂಜೆತನ

28 KRN-1
Published on

ಕೆ.ಆರ್.ನಗರ: ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಇಂದು ಸಾಕಷ್ಟು ಮಹಿಳೆಯರು ಗರ್ಭವತಿಯಾಗಲು ಕಷ್ಟಪಡುವಂತಾಗಿ ದಂಪತಿ ನೋವು ಅನುಭವಿಸುತ್ತಿದ್ದಾರೆ. ಇಂಥವರಿಗಾಗಿಯೇ ಇನ್‌ವಿಟ್ರೊ ಫರ್ಟಿಲೈಸೇಶನ್ (ಬಂಜೆತನ ನಿವಾರಣೆ) ಭರವಸೆ ನೀಡುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ತಿಳಿಸಿದರು.


ಪಟ್ಟಣದ ತಾಲೂಕು ಪಂಚಾಯತಿಯ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಐವಿಎಫ್ (ಬಂಜೆತನ ನಿವಾರಣೆ) ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಈ ವಿಧಾನ ಹೆಚ್ಚು ಪ್ರಚಲಿತದಲ್ಲಿದ್ದು, ಸಾಕಷ್ಟು ದಂಪತಿಗಳಿಗೆ ಆಶಾಕಿರಣವಾಗಿದೆ ಹಾಗಾಗಿ ಪ್ರತಿ ವರ್ಷ ಜುಲೈ 25ರಂದು ವಿಶ್ವ ಐವಿಎಫ್ ದಿನವನ್ನು ಆಚರಿಸಲಾಗುತ್ತದೆ ಎಂದರು.


ಜು.25 ರಂದು ವಿಶ್ವ ಐವಿಎಫ್ ದಿನಾಚರಣೆ ಮತ್ತು ಮೊದಲ ಟೆಸ್ಟ್‌ಟ್ಯೂಬ್ ಮಗುವಾದ ಲೂಯಿಸ್ ಬ್ರೌನ್ ಹುಟ್ಟುಹಬ್ಬದ ಪ್ರಯುಕ್ತ, ಪುನರುತ್ಪತ್ತಿ ಎಂಡೊಕ್ರಿನಾಲಜಿ ಮತ್ತು ಸಂತಾನ ಲಾಭಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಆದ ವೈಜ್ಞಾನಿಕ ಪ್ರಗತಿಯನ್ನು ಅವಲೋಕಿಸಲಾಯಿತು. ವಿಶ್ವ ಐವಿಎಫ್ ದಿನದ ಇತಿಹಾಸ ಐವಿಎಫ್ ಯಾತ್ರೆಯು 1978ರಲ್ಲಿ ಬ್ರಿಟಿಷ್ ಸಂಶೋಧಕರಾದ ರಾಬರ್ಟ್ ಎಡ್ವರ್ಡ್ಸ್, ಪ್ಯಾಟ್ರಿಕ್ ಸ್ಟೆಷ್ಟೋ ಮತ್ತು ಜೀನ್ ಪರ್ಡಿ ಅವರಿಂದ ಪ್ರಾರಂಭವಾಯಿತು ಎಂದರು.


ಲೂಯಿಸ್ ಬ್ರೌನ್ ವಿಶ್ವದ ಮೊದಲ ಟೆಸ್ಟ್‌ಟ್ಯೂಬ್ ಶಿಶು ಜನನದೊಂದಿಗೆ ಇತಿಹಾಸವನ್ನು ಸೃಷ್ಟಿಸಿದರು. 1978ರಲ್ಲಿ ಯಶಸ್ವಿಯಾಗಿ ಪ್ರಾರಂಭವಾದ ನಂತರ, ಐವಿಎಫ್ ತಂತ್ರಜ್ಞಾನವು ಸಂತಾನೋತ್ಪತ್ತಿ ಸಮಸ್ಯೆಗಳಿಂದ ಬಳಲುತ್ತಿರುವ ಲಕ್ಷಾಂತರ ವ್ಯಕ್ತಿಗಳು ಮತ್ತು ದಂಪತಿಗಳಿಗೆ ಪೋಷಕತ್ವದ ಬಾಗಿಲನ್ನು ತೆರೆಯುತ್ತಿದೆ ಮತ್ತು ಕೇವಲ ಕನಸು ಎಂದು ಭಾವಿಸಿದ್ದನ್ನು ಸಾಧಿಸಲು ಸಹಾಯ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.


ಪ್ರಸೂತಿ ತಜ್ಞ ವೈದ್ಯೆಡಾ.ಭವಾನಿ ಮಾತನಾಡಿದರು. ಈ ಸಂದರ್ಭದಲ್ಲಿ ವೈದ್ಯರಾದ ಡಾ.ಅಂಬಿಕಾದಾಸ್, ಡಾ.ರೇವಣ್ಣ, ಡಾ.ಮೋನಿಕಾ, ನೇತ್ರಾಧಿಕಾರಿ ಚೇತನ್, ಹಿರಿಯ ಆರೋಗ್ಯ ನಿರೀಕ್ಷರಾದ ಕೆ.ವಿ.ರಮೇಶ್, ಮಹೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕೆ.ಎಸ್.ಪಾರ್ವತಿ, ಕ್ಷೇತ್ರ ವ್ಯವಸ್ಥಾಪಕಿ ಬೇಬಿರೇಖಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net