ಕೀಳರಿಮೆ ತೊರೆದರೆ ಸಾಧನೆ ಸಾಧ್ಯ

07Jaggu12
ಬೆಳಗಾವಿ ನಗರದ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಬಿಎಸ್ಸಿ ಪದವಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ವಿವಿಧ ಸ್ಪರ್ಧೆ ವಿಜೇತರಿಗೆ ಡಾ.ಪಿ.ಜಿ.ಕೆಂಪಣ್ಣವರ ಪ್ರಶಸ್ತಿ ವಿತರಿಸಿದರು.
Published on

ಬೆಳಗಾವಿ: ವಿದ್ಯಾರ್ಥಿಗಳು ಗರ್ಭಗುಡಿಯೊಳಗಿರುವ ಶಿಲೆಯಾಗಬೇಕೆ ಹೊರತು ಮೆಟ್ಟಿಲು ಆಗಬಾರದು ಎಂದು ಪ್ರಾಧ್ಯಾಪಕ ಡಾ.ಪಿ.ಜಿ.ಕೆಂಪಣ್ಣವರ ಹೇಳಿದರು.

ನಗರದ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಬಿಎಸ್ಸಿ (ಸಕ್ಕರೆ ವಿಜ್ಞಾನ ಮತ್ತು ತಂತ್ರಜ್ಞಾನ) ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆ ತೊರೆದು ಸಾಧನೆಗೆ ಮುಂದಾಗಬೇಕು ಎಂದರು. ಜಂಬಗಿ ಪಿಯು ಕಾಲೇಜಿನ ಪ್ರಾಚಾರ್ಯ ಆನಂದ ಖೋತ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿ, ಗ್ರಂಥಾಲಯಗಳ ಬಳಕೆ ಮಾಡಿ, ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.

ಧೈರ್ಯಶೀಲ ಪಾಟೀಲ, ತಂತ್ರಜ್ಞಾನ ಮತ್ತು ಎಥೆನಾಲ್ ಉಪಯೋಗ ಕುರಿತು ತಿಳಿಸಿದರು. ಪ್ರಾಚಾರ್ಯ ಡಾ.ಬಿ.ಆರ್.ಖಾಂಡಗಾವೆ ಅಧ್ಯಕ್ಷತೆ ವಹಿಸಿದ್ದರು. ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಚೆಸ್, ರನ್ನಿಂಗ್, ಗುಂಡು ಎಸೆತ, ವಾಲಿಬಾಲ್, ಕ್ರಿಕೆಟ್ ಇನ್ನಿತರ ಕ್ರೀಡೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶೈಕ್ಷಣಿಕ ವರ್ಷದಲ್ಲಿ ಹೆಚ್ಚು ಅಂಕ ಗಳಿಸಿದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸುಪ್ರೀತ್ ಪಿರಗನ್ನವರ ಪ್ರಥಮ, ಸೂರಜ್‌ಸಿಂಗ್ ಚೂಪದಾರ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಅಭಿನಂದನ ಪಾಟೀಲ ಅವರನ್ನು ಗೌರವಿಸಲಾಯಿತು. ಕಾಲೇಜಿನ ಸಂಯೋಜಕ ಪ್ರೊ.ಎ.ಆರ್.ತಾರದಾಳೆ ಸ್ವಾಗತಿಸಿದರು. ಪ್ರೊ.ದೀಪಾ ಅಂಗಡಿ ಪರಿಚಯಿಸಿದರು. ಪ್ರೊ.ಶ್ವೇತಾ ಭಂಡಾರಿ ನಿರ್ವಹಿಸಿದರು. ಡಾ. ಹೇಮಂತಿ ನಿರೂಪಿಸಿದರು. ಪ್ರೊ.ಸಂದೀಪ ಬಡಿಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net