

ಹರಪನಹಳ್ಳಿ: ರೈತರು ಸರ್ವ ಸಮಕುಲ ಜಾತಿಗೂ ಅನ್ನ ನೀಡುವ ಮೂಲಕ ತ್ರಿವಿಧ ದಾಸೋಹಿಯಾಗಿದ್ದಾರೆ ಎಂದು ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: ಕೆರೆ ತುಂಬಿಸದೆ ರೈತರಿಗೆ ಅನ್ಯಾಯ
ಪಟ್ಟಣದ ಡಾ.ಬಾಬು ಜಗಜೀವನರಾಮ್ ಸಭಾಂಗಣದಲ್ಲಿ ತಾಲೂಕು ಹಡಪದ ಸಮಾಜದಿಂದ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಹಡಪದ ಸಮಾಜದ ಕ್ಷೌರಿಕ ವೃತ್ತಿಯ ಬಗ್ಗೆ ಅಂದಿನ ಕಾಲದಲ್ಲಿ ಕೀಳರಿಮೆಯಿಂದ ಕಾಣಲಾಗುತ್ತಿತ್ತು. ಇಂದು ಅದೇ ವೃತ್ತಿ ದೊಡ್ಡ ದುಡಿಮೆಯಾಗಿ ಪರಿವರ್ತನೆಯಾಗಿದೆ ಎಂದರು.
ಹಡಪದ ಸಮುದಾಯದ ಜನರಲ್ಲಿ ಕುಲ ಕಸುಬಿನ ಬಗ್ಗೆ ಗೌರವವಿರಬೇಕು ಯಾವುದೇ ಕೀಳರಿಮೆ ಕಾಣದೆ ವೃತ್ತಿ ಮುಂದುವರಿಸಬೇಕು. ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಹಡಪದ ಎಂದು ನಮೂದಿಸಿ ಧರ್ಮವೆಂದರೆ ಲಿಂಗಾಯತ ಎಂದು ನಮೂದಿಸಬೇಕು.
ಮಕ್ಕಳಿಗೆ ಸಂಸ್ಕಾರಯುತ ಜೀವನ ಕಲಿಸಿ. ಜನಪ್ರತಿನಿಧಿಗಳು ಸಣ್ಣ ಸಮಾಜವನ್ನು ಪರಿಗಣಿಸದೆ ಕೇವಲ ಮತಗಳ ಬಗ್ಗೆ ಚಿಂತನೆ ನಡೆಸುತ್ತಾರೆ, ಅವರನ್ನು ಸಮಾಜದತ್ತ ಸೆಳೆಯಲು ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಚನ್ನಬಸವ ಶಿವಯೋಗಿ ಸ್ವಾಮೀಜಿ ತಿಳಿಸಿದರು.
ಹಡಪದ ಸಮಾಜದ ತಾಲೂಕು ಅಧ್ಯಕ್ಷ ಎಚ್.ಬಿ.ನಾಗರಾಜ್ ಮಾತನಾಡಿ, ಸಣ್ಣ-ಪುಟ್ಟ ಸಮಾಜ ಅಭಿವೃದ್ಧಿಯಾಗಲು ಯಾವ ಜನಪ್ರತಿನಿಧಿಗಳೂ ಸಹಕರಿಸುವುದಿಲ್ಲ. ಅದ್ದರಿಂದ ನಮ್ಮ ಸಮುದಾಯದ ಯುವಕರು ಜಾಗೃತರಾಗಿ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಬೇಕು.
ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣ ನೀಡಿ ಉನ್ನತ ಹುದ್ದೆ ಪಡೆದಾಗ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು. ಪ್ರಮುಖರಾದ ನೀಲಗುಂದ ಪ್ರಭು, ಶಶಿಧರ್ ಪೂಜಾರ್, ಎಂ.ಎಚ್ ಗೀತಾ, ಕೊಟ್ರೇಶಪ್ಪ, ಮೈದೂರು ಕುಬೇರಪ್ಪ, ದೇವಕ್ಕ, ಗೌರಮ್ಮ, ಗಿರಿಯಾಪುರ ಶಿವಜ್ಜ ಇತರರಿದ್ದರು.