ಲ್ಯಾಬ್‌ಟೆಕ್ನಿಷಿಯನ್‌ಗೆ ಸೋಂಕು; 2 ತಾಲೂಕಿನಲ್ಲಿ ಕರೊನಾ ಪತ್ತೆ; ಹೊಸಕೋಟೆ ತಾಲೂಕು ಆಸ್ಪತ್ರೆ ಸೀಲ್‌ಡೌನ್

17 Nela Ph 02 Oushadi Simpadane
Published on

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಜೂ.17ರಂದು ಹೊಸಕೋಟೆ ಹಾಗೂ ನೆಲಮಂಗಲದಲ್ಲಿ ತಲಾ ಒಂದೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.

ಹೊಸಕೋಟೆ ತಾಲೂಕು ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ವ್ಯಕ್ತಿಗೆ ಕಳೆದೆರಡು ದಿನಗಳಿಂದ ನೆಗಡಿ, ಕೆಮ್ಮು ಕಾಣಿಸಿಕೊಂಡಿತ್ತು. ಗಂಟಲು ದ್ರವ ಪರೀಕ್ಷೆಯಲ್ಲಿ ಕರೊನಾ ಧೃಡಪಟ್ಟಿದೆ ಎಂದು ತಹಸೀಲ್ದಾರ್ ಗೀತಾ ತಿಳಿಸಿದ್ದಾರೆ.

ಆಸ್ಪತ್ರೆಗೆ ಸ್ಯಾನಿಟೈಸ್: ಸೋಂಕಿತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಹೊಸಕೋಟೆ ಆಸ್ಪತ್ರೆಯನ್ನು ಸ್ಯಾನಿಟೈಸೇಷನ್ ಮಾಡಿ ಸೀಲ್‌ಡೌನ್ ಮಾಡುವಂತೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶಿಸಿದ್ದಾರೆ. ಕೆಲವು ದಿನಗಳಿಂದ ಅಸ್ಪತ್ರೆಗೆ ಬಂದು ಹೋದವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಿಕೊಂಡವರ ಹುಡುಕಾಟ ನಡೆಯುತ್ತಿದ್ದು ಎಲ್ಲರನ್ನೂ ಕ್ವಾರಂಟೈನ್ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಆಸ್ಪತ್ರೆ ಸುತ್ತಲಿನ 200 ಮೀಟರ್ ಆವರಣವನ್ನು ಕಂಟೇನ್ಮೆಂಟ್ ಜೋನ್ ಮಾಡಲಾಗಿದೆ.

ನೆಲಮಂಗಲದಲ್ಲಿ ನಾಲ್ಕನೇ ಕೇಸ್: ತಾಲೂಕಿನಲ್ಲಿ ಬುಧವಾರ 1 ಪ್ರಕರಣ ದೃಢಪಟ್ಟಿದ್ದು, ತಾಲೂಕಿನಲ್ಲಿ ಇದು ನಾಲ್ಕನೇ ಪ್ರರಕಣವಾಗಿದೆ. ತಿರುಮಲಾಪುರದ 50 ವರ್ಷದ ವ್ಯಕ್ತಿಗೆ ನಾಲ್ಕೈದು ದಿನಗಳ ಹಿಂದೆ ತೀವ್ರ ಕೆಮ್ಮು, ಜ್ವರ ಕಾಣಿಸಿಕೊಂಡಿದ್ದು, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲ ದ್ರವ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತನ ಪ್ರಥಮ ಸಂಪರ್ಕದಲ್ಲಿದ್ದ 5 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಸೋಂಕಿತ ವ್ಯಕ್ತಿ ನಗರದ ಬಸ್ ನಿಲ್ದಾಣ, ತಾಲೂಕು ಕಚೇರಿ ಸೇರಿ ಕೆಲ ಪ್ರದೇಶದಲ್ಲಿ ಓಡಾಡಿರುವುದು ತಿಳಿದುಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ತಾಲೂಕು ಆಡಳಿತ ನಗರಸಭೆ ಸಹಯೋಗದಲ್ಲಿ ತಾಲೂಕು ಕಚೇರಿ ಅವರಣ ಸೇರಿ ಹಲವು ಕಡೆಗಳಲ್ಲಿ ಸೋಡಿಯಂ ಹೈಪೋ ಕ್ಲೋರೈಡ್ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net