ಸಮುದಾಯಕ್ಕೆ ಹರಡದಿರಲಿ ಸೋಂಕು

18-HVR-07
Published on

ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಸಮುದಾಯಕ್ಕೆ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಮನೆ ಮನೆಗೆ ಭೇಟಿ ನೀಡಿ ಸರ್ವೆ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಭಾ ಭವನದಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಂಗಳವಾರ ಏರ್ಪಡಿಸಿದ್ದ ತಹಸೀಲ್ದಾರ್​ರ, ತಾಪಂ ಇಒ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಐದಕ್ಕಿಂತ ಹೆಚ್ಚಿನ ಕೋವಿಡ್ ಪ್ರಕರಣಗಳು ಪತ್ತೆಯಾದ ಪ್ರದೇಶಕ್ಕೆ ಮೊದಲ ಆದ್ಯತೆ ನೀಡಿ ಅಲ್ಲಿಂದ ಸರ್ವೆ ಆರಂಭಿಸಿ ಎರಡು ದಿನದೊಳಗಾಗಿ ವರದಿ ನೀಡಬೇಕು. ಪಾಸಿಟಿವ್ ವರದಿ ಬಂದ ತಕ್ಷಣ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪತರ ಪಟ್ಟಿ ಮಾಡಿ ಅವರನ್ನು ತಪಾಸಣೆಗೊಳಪಡಿಸಬೇಕು. ತಪಾಸಣೆ ಸಂದರ್ಭದಲ್ಲಿ ಶೇ. 40ರಷ್ಟು ರ್ಯಾಪಿಡ್ ಹಾಗೂ ಶೇ. 60ರಷ್ಟು ಆರ್.ಟಿ.ಪಿ.ಸಿ.ಆರ್. ಟೆಸ್ಟ್​ಗಳಿಗೆ ಒಳಪಡಿಸಬೇಕು’ ಎಂದು ಸೂಚಿಸಿದರು.

ಕೋಮಾರ್ಬಿಡಿಟಿ (ತೀವ್ರ ಸ್ವರೂಪದ ಅನ್ನ ಕಾಯಿಲೆಯಿಂದ ಬಳಲುತ್ತಿರುವವರು) ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೋಮ್ ಐಸೋಲೇಷನ್ ಮಾಡುವ ಮೊದಲು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಬೇಕು. ಪರೀಕ್ಷೆಗೊಳಪಡಿಸಿ ಅಗತ್ಯ ಔಷಧೋಪಚಾರ ನಂತರ ಅವರ ಪರಿಸ್ಥಿತಿ ನೋಡಿಕೊಂಡು ಮನೆಬಿಟ್ಟು ಹೋಗದಂತೆ ಹಾಗೂ ಕೋವಿಡ್ ಹೋಮ್ ಐಸೋಲೇಷನ್ ನಿಯಮಾವಳಿ ಪಾಲಿಸುವ ಕರಾರು ಪತ್ರ ಬರೆಸಿಕೊಂಡು ಕಳುಹಿಸಬೇಕು. 90ಕ್ಕಿಂತ ಕಡಿಮೆ ಪಲ್ಸ್​ರೇಟ್ ಇರುವವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲು ಕ್ರಮ ವಹಿಸಬೇಕು. ಮೂಲ ಹಂತದಲ್ಲೇ ಸೋಂಕು ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಕೋವಿಡ್ ಕೇರ್ ಸೆಂಟರ್​ನಲ್ಲಿ ದಾಖಲಾದ ಸೋಂಕಿತರು ತಪ್ಪಿಸಿಕೊಳ್ಳದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್ ಕೇರ್ ಸೆಂಟರ್​ಗಳಿಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ ಪಾಸಿಟಿವ್ ಬಂದ ಎಲ್ಲರಿಗೂ ಆಕ್ಸಿಜನ್ ಹಾಗೂ ರೆಮ್ೆಸಿವಿರ್ ನೀಡುವ ಅಗತ್ಯವಿರುವುದಿಲ್ಲ. ಯಾವ ರೋಗಿಗೆ ಏನು ಚಿಕಿತ್ಸೆ ಕೊಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ಆಕ್ಸಿಜನ್ ಹಾಗೂ ರೆಮ್ೆಸಿವಿರ್ ನೀಡಿ ಎಂದು ಒತ್ತಡ ಹಾಕಬಾರದು. ನನ್ನ ತಾಲೂಕು, ನನ್ನ ಆಸ್ಪತ್ರೆ ಎಂಬುದನ್ನು ಬಿಟ್ಟು ಎಲ್ಲರನ್ನೂ ಬದುಕಿಸುವ ಕೆಲಸ ಮಾಡೋಣ. ಆಸ್ಪತ್ರೆಯಲ್ಲಿ ಸುಧಾರಿಸಿಕೊಂಡವರನ್ನು ಕೋವಿಡ್ ಕೇರ್ ಸೆಂಟರ್​ಗಳಿಗೆ ಕಳುಹಿಸಿ. ಅಗತ್ಯಕ್ಕನುಸಾರ ವೈದ್ಯಕೀಯ ಉಪಚಾರ ಕಲ್ಪಿಸಿ. ಪಾಸಿಟಿವ್ ವ್ಯಕ್ತಿಗಳ ಮನೆಯನ್ನು ಮೈಕ್ರೋ ಕಂಟೇನ್ಮೆಂಟ್ ಎಂದು ಘೊಷಿಸಿ. ಮೈಕ್ರೋ ಕಂಟೇನ್ಮೆಂಟ್ ಘೊಷಿಸಿದ ಮನೆಯವರಿಗೆ ಜೀವನಾಶ್ಯಕ ವಸ್ತುಗಳನ್ನು ಪೂರೈಸಲು ತಹಸೀಲ್ದಾರ್​ರು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಮಹಮ್ಮದ್ ರೋಷನ್ ಮಾತನಾಡಿ, ಕೋವಿಡ್ ಸೋಂಕು ಕೇವಲ 10 ದಿನಗಳಲ್ಲಿ ಬಂದುಹೋಗುವ ಸೋಂಕಲ್ಲ. ಎರಡನೇ ಅಲೆ ನಂತರ ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ಈಗಿನಿಂದಲೇ ಒಂದು ವರ್ಷದ ಯೋಜನೆ ರೂಪಿಸಿ ಕಾರ್ಯೋನ್ಮುಖವಾಗಬೇಕು. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಮಾನವ ಸಂಪನ್ಮೂಲ ಕೊರತೆಯನ್ನು ಸರಿದೂಗಿಸಲು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಯನ್ನು ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸರದಿ ಪ್ರಕಾರ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಸಲಹೆ ನೀಡಿದರು. ಕೋವಿಡ್ ನಿಯಂತ್ರಣ ಚಟುವಟಿಕೆಗೆ ಉಳಿದ ಎಲ್ಲ 36 ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಂಡು ಕೋವಿಡ್ ಹತೋಟಿಗೆ ಕಾರ್ಯೋನ್ಮುಖರಾಗಬೇಕು ಎಂದರು.

ಎಸ್ಪಿ ಕೆ.ಜಿ. ದೇವರಾಜ ಮಾತನಾಡಿ, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂರ್ಪತರನ್ನು 48 ಗಂಟೆಯೊಳಗೆ ಪತ್ತೆಹಚ್ಚುವ ಕಾರ್ಯವಾಗಬೇಕು. ಸೋಂಕಿತರ ಮನೆಗೆ ಸ್ಟಿಕ್ ಅಂಟಿಸಿದರೆ ಗುರುತಿಸಲು ಸುಲಭವಾಗುತ್ತದೆ. ವಿವಿಧ ಇಲಾಖೆಗಳ ಮಾನವ ಸಂಪನ್ಮೂಲ ಬಳಸಿಕೊಂಡು ಎಲ್ಲರೂ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡೋಣ ಎಂದರು.

ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಮಾತನಾಡಿ, ಹೋಂ ಐಸೋಲೇಷನ್​ನಲ್ಲಿರುವ ಸೋಂಕಿತರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಡಿಎಚ್​ಒ ಡಾ. ಜಯಾನಂದ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷ, ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳಾಗಡ್ಡಿ, ಅನ್ನಪೂರ್ಣ ಮುದಕಮ್ಮನವರ ಹಾಗೂ ಎಲ್ಲ ತಾಲೂಕಿನ ತಹಸೀಲ್ದಾರರು, ತಾಪಂ ಇಒಗಳು, ಆರೋಗ್ಯಾಧಿಕಾರಿಗಳು ಸಭೆಯಲ್ಲಿದ್ದರು.

ಬೆಡ್ ವ್ಯವಸ್ಥೆ ಪರಿಶೀಲಿಸಿ

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಕಡಿಮೆ ಇದ್ದರೂ ಕೋವಿಡ್​ನಿಂದ ಮರಣ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯ ಸೋಂಕಿತರನ್ನು ಬೇರೆ ಜಿಲ್ಲೆಗಳ ಆಸ್ಪತ್ರೆ ಕಳುಹಿಸುವ ಮೊದಲು ಅಲ್ಲಿ ಬೆಡ್ ವ್ಯವಸ್ಥೆ ಇದೆಯೇ ಎಂಬ ಪೂರ್ವ ಮಾಹಿತಿಯನ್ನು ಪಡೆದು ರೋಗಿಗಳನ್ನು ದಾಖಲಿಸುವ ಕೆಲಸವಾಗಬೇಕು. ಅಕ್ಕಪಕ್ಕದ ಜಿಲ್ಲೆಗಳಲ್ಲೂ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಬೆಡ್​ಗಳು ದೊರೆಯದೆ ಜಿಲ್ಲೆಯ ಸೋಂಕಿತರಿಗೆ ತೊಂದರೆಯಾಗಬಾರದು ಎಂದು ಜಿಲ್ಲಾಧಿಕಾರಿ ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net