ಮೃತ ವೃದ್ಧನ ಪತ್ನಿಗೂ ಸೋಂಕು ; ಮೂವರ ವರದಿ ನೆಗೆಟಿವ್

30Tmk_Corona_Death (1)
Published on

ತುಮಕೂರು: ಕರೊನಾ ಸೋಂಕಿನಿಂದ ಮೃತಪಟ್ಟ ನಗರದ ಕೆಎಚ್‌ಬಿ ಕಾಲನಿ ನಿವಾಸಿ 74 ವರ್ಷದ ವೃದ್ಧನ ಪತ್ನಿಗೂ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಸಂಖ್ಯೆ 5ಕ್ಕೆ ಏರಿದೆ. ಮೃತ ವೃದ್ಧನ ಜತೆ ಪತ್ನಿ ಹಾಗೂ ಪತ್ನಿಯ ಸಹೋದರ ಮತ್ತು ಮಕ್ಕಳಿಬ್ಬರು ವಾಸವಿದ್ದು, ಮೂವರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ವೃದ್ಧನಲ್ಲಿ ಸೋಂಕಿರುವುದು ಬುಧವಾರ ದೃಢಪಡುತ್ತಿದ್ದಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿತ್ತು. ಅಲ್ಲದೆ, ತುರ್ತು ಪರೀಕ್ಷೆಗೆ ಗಂಟಲು ದ್ರವ ಹಾಗೂ ರಕ್ತದ ಮಾದರಿ ಕಳುಹಿಸಿದ್ದು ಮೃತನ ಪತ್ನಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ. ನೆಗೆಟಿವ್ ಬಂದಿರುವ ಮೂವರನ್ನೂ ಐಸೋಲೇಷನ್‌ನಲ್ಲಿರಿಸಲಾಗಿದ್ದು, 12 ದಿನಗಳ ಬಳಿಕ ಮತ್ತೊಮ್ಮೆಪರೀಕ್ಷೆಗೊಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಐಸೋಲೇಷನ್‌ನಲ್ಲಿ 51 ಮಂದಿ: ಮೃತನ ಅಂತ್ಯಸಂಸ್ಕಾರ ವೇಳೆ ಭಾಗಿಯಾಗಿದ್ದ ಹಾಗೂ ಅಂತಿಮ ದರ್ಶನ ಪಡೆದ ಒಟ್ಟು 51 ಮಂದಿಯನ್ನು ಪ್ರಾಥಮಿಕ ಸಂಪರ್ಕದಲ್ಲಿದ್ದವರೆಂದು ಗುರುತಿಸಿದ್ದು, ಜಿಲ್ಲಾ ಆಸ್ಪತ್ರೆ ಐಸೋಲೇಷನ್‌ನಲ್ಲಿರಿಸಲಾಗಿದೆ. ಎಲ್ಲರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

5ಕ್ಕೇರಿದ ಕೇಸ್: ಜಿಲ್ಲೆಯ ಐವರಲ್ಲಿ ಶಿರಾ ಮೂಲದ 65 ವರ್ಷದ ವೃದ್ಧ ಹಾಗೂ ತುಮಕೂರಿನ ಕೆಎಚ್‌ಬಿ ಕಾಲನಿ ನಿವಾಸಿ 74 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಶಿರಾ ವೃದ್ಧನ ಪುತ್ರ 13 ವರ್ಷದ ಬಾಲಕ ಗುಣಮುಖನಾಗಿದ್ದಾನೆ. ಗುಜರಾತ್ ಮೂಲದ 32 ವರ್ಷದ ಧರ್ಮ ಪ್ರಚಾರಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ವೃದ್ಧನ ಪತ್ನಿಯೂ ಚಿಕಿತ್ಸೆಗೆ ಒಳಗಾಗಿದ್ದಾರೆ.

ಹಾಲಿ, ಮಾಜಿ ಎಂಎಲ್‌ಎ ವಾಗ್ವಾದ: ವೃದ್ಧನ ಅಂತ್ಯಸಂಸ್ಕಾರವು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಮಾಜಿ ಶಾಸಕ ಬಿ. ಸುರೇಶ ಗೌಡ ಅವರ ನಡುವೆ ವಾಕ್ಸಮ ರಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ. ಕುಂಭೀಪಾಳ್ಯದಲ್ಲಿ ಅಂತ್ಯಸಂಸ್ಕಾರ ನಡೆಸಲು ತಾನೇನಾದರೂ ಅಧಿಕಾರಿಗಳಿಗೆ ಕರೆ ಮಾಡಿದ್ದರೆ ನೀನು (ಸುರೇಶಗೌಡ) ರಾಜಕೀಯ ತ್ಯಜಿಸುತ್ತೀಯಾ ಅಂತ ಗೌರಿಶಂಕರ್ ಸವಾಲು ಹಾಕಿರುವ ವಿಡಿಯೋ ಸದ್ದುಮಾಡುತ್ತಿದೆ.

ಕರೊನಾ ಸೋಂಕಿನಿಂದ ಮೃತಪಟ್ಟ ವೃದ್ಧನ ಅಂತ್ಯಸಂಸ್ಕಾರವನ್ನು ಮೃತದೇಹ ನಿರ್ವಹಣೆ ಮಾರ್ಗಸೂಚಿಗಳಂತೆ ಮಾಡುವಲ್ಲಿ ನಮ್ಮ (ಜಿಲ್ಲಾಡಳಿತ) ಲೋಪ ಆಗಿದೆ. ಏ.22ರಂದು ಮೃತ ಉಸಿರಾಟ ತೊಂದರೆಯಿಂದ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ಸಂಗ್ರಹಿಸಿದ್ದ ಮೊದಲ ಸ್ಯಾಂ ಪಲ್ ನೆಗೆಟಿವ್ ಬಂದಿ ದ್ದರಿಂದ ವೈದ್ಯರ ನಡುವಿನ ಸಂವಹನ ಕೊರತೆಯಿಂದ 26ರಂದು ಆತ ಸತ್ತ ಬಳಿಕ ಮೃತದೇಹವನ್ನು ಅವರ ಕುಟುಂಬಕ್ಕೆ ಒಪ್ಪಿಸಲಾಗಿತ್ತು. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ 50 ಜನರನ್ನು ಈಗ ಐಸೋಲೇಷನ್‌ನಲ್ಲಿರಿಸಲಾಗಿದೆ. ಅಂತ್ಯಸಂಸ್ಕಾರ ನಡೆದ ಸ್ಥಳವನ್ನು ಸೀಲ್‌ಡೌನ್ ಮಾಡುವ ಪ್ರಶ್ನೆ ಇಲ್ಲ. ಜೆ.ಸಿ.ಮಾಧುಸ್ವಾಮಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net