

ಕಂಪ್ಲಿ: ಮಠದ ಅಭಿವೃದ್ಧಿಗಾಗಿ ಮಂಜೂರು ಮಾಡಿದ 25 ಲಕ್ಷ ರೂ. ಅನ್ನು ಕರೊನಾ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗಲೆಂದು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯರು ಹೇಳಿದರು.
ಇಲ್ಲಿನ ಕಲ್ಗುಡಿ ಲೇಔಟ್ ಬಳಿಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಸೋಮವಾರ ಮಾಜಿ ಶಾಸಕ ಟಿ.ಎಚ್.ಸುರೇಶ್‌ಬಾಬು ಅವರ ಎಸ್.ಬಿ.ಫೌಂಡೇಷನ್‌ನಿಂದ ತೆರೆದಿರುವ ಕೋವಿಡ್ ಕೇರ್ ಸೆಂಟರ್ ಚಾಲನೆ ನೀಡಿ ಮಾತನಾಡಿದರು. ದೇಶದ ಜನತೆಗೆ ಕರೊನಾ ಲಸಿಕೆ ಹಾಕಿಸಲು ಖಜಾನೆಗೆ ಹೊರೆಯಾಗಲಿದ್ದು, ಆರ್ಥಿಕ ಹೃದಯಶೀಲರು, ಸಂಘಟನೆ, ಮಠಮಾನ್ಯಗಳು ತಮ್ಮ ಹಣದಿಂದ ಜನತೆಗೆ ಕರೊನಾ ಲಸಿಕೆ ಹಾಕಿಸಲು ಮುಂದಾಗಬೇಕು. ಈ ದಿಸೆಯಲ್ಲಿ ಮಠ 2 ಲಕ್ಷ ರೂ. ವೆಚ್ಚದಲ್ಲಿ ಜನತೆಗೆ ಕರೊನಾ ಲಸಿಕೆ ಹಾಕಿಸಲು ಸಿದ್ಧವಿದೆ. ಮಾಜಿ ಶಾಸಕ ಸುರೇಶ್ ಬಾಬು ಸ್ವಂತ ವೆಚ್ಚದಲ್ಲಿ ಆರೈಕೆ ಕೇಂದ್ರ ಆರಂಭಿಸಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕ ಟಿ.ಎಚ್.ಸುರೇಶ್‌ಬಾಬು ಮಾತನಾಡಿ, ಈ ಭಾಗದ ಕರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ಕೇಂದ್ರ ತೆರೆಯಲಾಗಿದ್ದು, ಇದರಲ್ಲಿ ರಾಜಕೀಯವಿಲ್ಲ. ಕುರುಗೋಡಿನಲ್ಲೂ ಶೀಘ್ರ ಸುಸಜ್ಜಿತ ಸಿಸಿಸಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ತಹಸೀಲ್ದಾರ್ ಗೌಸಿಯಾಬೇಗಂ, ಡಾ.ರಾಧಿಕಾ, ಡಾ.ಮಂಜುನಾಥ, ಡಾ.ಕೃಷ್ಣಕುಮಾರ್, ಪ್ರಮುಖರಾದ ಟಿ.ವಿ.ಸುದರ್ಶನರೆಡ್ಡಿ, ಅಳ್ಳಳ್ಳಿ ವೀರೇಶ್, ಪಿ.ಬ್ರಹ್ಮಯ್ಯ, ಜಿ.ಸುಧಾಕರ, ಬಿ.ಸಿದ್ದಪ್ಪ, ಎನ್.ಪುರುಷೋತ್ತಮ, ವೆಂಕಟೇಶ್ ಶೆಟ್ಟಿ, ಸಿ.ಡಿ.ಮಹಾದೇವ ಇತರರಿದ್ದರು.