

ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಬುಧವಾರ 27 ಕರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಸೋಂಕಿತರ ಸಂಖ್ಯೆ 435ಕ್ಕೆ ಏರಿಕೆಯಾಗಿದೆ. ಬೆಳಗಾವಿಯ ಹನುಮಾನ ನಗರ, ವಂಟಮುರಿ ಕಾಲನಿ, ಭಾರತ ನಗರ, ಉಜ್ವಲ ನಗರ, ತಾಲೂಕಿನ ಹಿಂಡಲಗಾ, ಕಾಕತಿ, ಅಥಣಿ, ಅಥಣಿ ತಾಲೂಕಿನ ಕೋಹಳ್ಳಿ, ಬಾಡಗಿ, ಸಂಬರಗಿ, ಗೋಕಾಕ, ಗುಜನಾಳ, ಖನಗಾವಿ, ಶಿಂಧಿಕುರಬೇಟ, ದುರದುಂಡಿ, ರಾಮದುರ್ಗ, ಚಿಕ್ಕೋಡಿಯಲ್ಲಿ ಕರೊನಾ ಪಾಸಿಟಿವ್ ಬಂದಿದೆ.
ಕೇರಳ ರಾಜ್ಯದಿಂದ ಹಿಂದಿರುಗಿದ 29 ವರ್ಷದ ಯುವಕ, ಬೆಂಗಳೂರಿನಿಂದ ಆಗಮಿಸಿದ 80 ವರ್ಷದ ವೃದ್ಧೆ, 48 ವರ್ಷದ ಮಹಿಳೆ, 45 ವರ್ಷದ ಪುರುಷ, ಮಹಾರಾಷ್ಟ್ರದಿಂದ ಬಂದಿರುವ 25 ವರ್ಷದ ಯುವತಿಗೆ ಸೋಂಕು ತಗುಲಿದೆ. ಸೋಂಕಿತರ ಸಂಪರ್ಕದಲ್ಲಿದ್ದ 23 ವರ್ಷದ ಯುವಕ, 46 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. ಉಳಿದವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಾವಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 26 ಜನರು ಗುಣಮುಖರಾಗಿ ಬುಧವಾರ ಬಿಡುಗಡೆಯಾಗಿದ್ದಾರೆ.
ಕಾಕತಿ ಠಾಣೆ ಸೀಲ್‌ಡೌನ್: ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದ ಆರೋಪಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಾಕತಿ ಪೊಲೀಸ್ ಠಾಣೆಯನ್ನು ಬುಧವಾರ ಸೀಲ್‌ಡೌನ್ ಮಾಡಲಾಗಿದೆ. ಆರೋಪಿ ಬಂಧನ ಮತ್ತು ವಿಚಾರಣೆ ವೇಳೆ, ಪ್ರಾಥಮಿಕ ಸಂಪರ್ಕದಲ್ಲಿದ್ದ ಐವರು ಪೊಲೀಸರು, ಓರ್ವ ಗೃಹರಕ್ಷಕ ಸಿಬ್ಬಂದಿಯನ್ನು ಸಾಂಸ್ಥಿಕ, ದ್ವಿತೀಯ ಸಂಪರ್ಕದಲ್ಲಿದ್ದ 10 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ರಾಮದುರ್ಗ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ 59 ವರ್ಷದ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟಿದೆ. ಹಾಗಾಗಿ, ನ್ಯಾಯಾಲಯ ಸೀಲ್‌ಡೌನ್ ಮಾಡಲಾಗಿದೆ.