ಮತ್ತೆ ಐವರಿಗೆ ಸೋಂಕು ದೃಢ

web 2
Published on

ಎನ್.ಆರ್.ಪುರ/ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ಐವರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 10ಕ್ಕೆ ಏರಿದೆ. ಶುಕ್ರವಾರ ಸೋಂಕು ಪತ್ತೆಯಾಗಿರುವವರು ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದರು. ಹೀಗಾಗಿ ದ್ವಿತೀಯ ಸಂಪರ್ಕ ಮತ್ತು ಸಮುದಾಯ ಹಂತದಲ್ಲಿ ಸೋಂಕು ಹರಡುವ ಭೀತಿ ನಿವಾರಣೆಯಾಗಿದೆ.

ಮೂಡಿಗೆರೆ ತಾಲೂಕು ನಂದಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಇದುವರೆಗೆ 468 ಜನರನ್ನು ಪತ್ತೆ ಮಾಡಲಾಗಿದೆ. ವೈದ್ಯರ ಸಂಪರ್ಕಕ್ಕೆ ಬಂದವರಲ್ಲಿ ಇದುವರೆಗೆ ಯಾರಿಗೂ ಸೋಂಕು ತಗುಲಿಲ್ಲ.

ಎರಡು ಕುಟುಂಬಗಳ 9 ಜನ ಮುಂಬೈನಿಂದ ಎನ್.ಆರ್.ಪುರಕ್ಕೆ ಆಗಮಿಸಿದ್ದು, ಅವರನ್ನು ಕೊಪ್ಪದಲ್ಲಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿಟ್ಟು ಗಂಟಲು ದ್ರವ ಮತ್ತು ರಕ್ತದ ಮಾದರಿ ಸಂಗ್ರಹ ಮಾಡಿ ಲ್ಯಾಬ್​ಗೆ ಕಳುಹಿಸಲಾಗಿತ್ತು. ಎರಡು ದಿನಗಳ ಹಿಂದೆ ಮೂವರ ರಿಪೋರ್ಟ್ ಬಂದಿದ್ದು ಅವರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು.

ಶುಕ್ರವಾರ ಆರು ಜನರ ಲ್ಯಾಬ್ ರಿಪೋರ್ಟ್ ಬಂದಿದ್ದು, ಅವರಲ್ಲಿ ಒಬ್ಬರನ್ನು ಹೊರತುಪಡಿಸಿ ಇತರ ಐವರಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ ಇಬ್ಬರು ಪುರುಷರು, ಓರ್ವ ಮಹಿಳೆ, ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿ ಇದ್ದು ಅವರನ್ನು ಚಿಕ್ಕಮಗಳೂರು ಕರೊನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಎನ್.ಆರ್.ಪುರ ತಾಲೂಕಿನಲ್ಲಿರುವ ಈ ಎರಡೂ ಕುಟುಂಬಗಳ ಇತರ ಸದಸ್ಯರ ಆರೋಗ್ಯದ ಮಾಹಿತಿ ಸಂಗ್ರಹ ಮಾಡಲಾಗುತ್ತಿದ್ದು, ರಕ್ತದೊತ್ತಡ, ಮಧುಮೇಹ ಮತ್ತಿತರ ಸಮಸ್ಯೆ ಇದೆಯೇ ಎಂಬ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ಮಾಡುತ್ತಿದೆ.

ಮುಂಬೈನಿಂದ ಇನ್ನೂ ಸಾಕಷ್ಟು ಮಂದಿ ಜಿಲ್ಲೆಗೆ ಆಗಮಿಸಲು ಕಾತರರಾಗಿದ್ದಾರೆ. ಆದರೆ ರಾಜ್ಯ ಸರ್ಕಾರ ಹೊರ ರಾಜ್ಯದವರ ಪ್ರವೇಶಕ್ಕೆ ತಡೆ ನೀಡಿರುವುದರಿಂದ ಕರೊನಾ ವ್ಯಾಪಕಗೊಳ್ಳುವುದು ಸದ್ಯಕ್ಕೆ ತಪ್ಪಿದೆ. ಉಳಿದಂತೆ ಮೂಡಿಗೆರೆಯ ವೈದ್ಯ ಹಾಗೂ ತರೀಕೆರೆಯ ಗರ್ಭಿಣಿಯ ಸಂಪರ್ಕದಲ್ಲಿದ್ದವರ ಹಲವರ ಪರೀಕ್ಷಾ ವರದಿ ಇನ್ನೂ ಬರಬೇಕಿದೆ.

68 ಪ್ರಾಥಮಿಕ ಸಂರ್ಪತರ ಪತ್ತೆ: ಮೂಡಿಗೆರೆ ತಾಲೂಕು ನಂದಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸೋಂಕಿತ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಿರುವ 668 ಜನರಲ್ಲಿ ಇದುವರೆಗೆ 468 ಜನರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ.

ವೈದ್ಯರಿಗೆ ಸೋಂಕು ದೃಢಪಟ್ಟ ದಿನದಿಂದ ಹಿಂದಿನ 14 ದಿನಗಳವರೆಗೆ ಚಿಕಿತ್ಸೆ ಪಡೆದ ರೋಗಿಗಳ ಪಟ್ಟಿ ಮಾಡಲಾಗಿದ್ದು, ಒಟ್ಟು 887 ಜನರಿಗೆ ಚಿಕಿತ್ಸೆ ನೀಡಿದ್ದಾರೆ. ಆಸ್ಪತ್ರೆ ದಾಖಲೆಯಲ್ಲಿ 887 ಜನರ ಹೆಸರಿದ್ದರೂ ಅವರಲ್ಲಿ 275 ಜನ ಹೆಚ್ಚು ಬಾರಿ ಚಿಕಿತ್ಸೆಗೆ ಬಂದಿರುವ ಕಾರಣ ಅವರ ಹೆಸರು ಪುನರಾವರ್ತನೆಯಾಗಿದೆ. ಪುನರಾವರ್ತನೆಯಾದ ಹೆಸರು ತೆಗೆದರೆ ಸೋಂಕಿತ ವೈದ್ಯರ ಬಳಿ ಚಿಕಿತ್ಸೆ ಪಡೆದವರ ಸಂಖ್ಯೆ 668 ಎಂಬುದು ಖಚಿತವಾಗಿದೆ. ಇದರಲ್ಲಿ ಇದುವರೆಗೆ 468 ಜನ ಪತ್ತೆಯಾಗಿದ್ದು, ಇನ್ನೂ 200 ಜನರ ಪತ್ತೆ ಮಾಡಬೇಕಿದೆ.

ಹಾಸನ ಜಿಲ್ಲೆ ಬೇಲೂರು ತಾಲೂಕಿನಿಂದಲೂ ನಂದಿಪುರ ಪ್ರಾಥಮಿಕ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಾರೆ. ಹೀಗಾಗಿ ರೋಗಿಗಳ ಪಟ್ಟಿಯನ್ನು ಬೇಲೂರು ಅಧಿಕಾರಿಗಳಿಗೂ ಕಳುಹಿಸಲಾಗಿದೆ.

ನಂದೀಪುರ, ಮಾಕನಹಳ್ಳಿ, ಗೋಣಿಬೀಡು, ಚಿನ್ನಿಗ ಮತ್ತು ಬಸ್ಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವೈದ್ಯರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಪತ್ತೆ ಕಾರ್ಯ ಇನ್ನೂ ನಡೆದಿದೆ. ನಂದಿಪುರ ವೈದ್ಯರ ಬಳಿ ಚಿಕಿತ್ಸೆ ಪಡೆದವರು ಇದ್ದರೆ ಸಂರ್ಪಸಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಧ್ವನಿವರ್ಧಕಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net