ಪ್ರತಿ ಕ್ಷೇತ್ರದಲ್ಲಿ ಗುರುತರ ಹೆಜ್ಜೆ

22 HRP 01
ಹರಪನಹಳ್ಳಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಅಡವಿಹಳ್ಳಿ ಗ್ರಾಪಂ ಸಹಯೋಗದೊಂದಿಗೆ ತಾಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ಮಹಿಳಾ ಹಾಗೂ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಸರ್ಕಾರಿ ಅಭಿಯೋಜಕಿ ಮೀನಾಕ್ಷಿ ಉದ್ಘಾಟಿಸಿದರು.
Published on

ಹರಪನಹಳ್ಳಿ: ಮಹಿಳೆ ಅಬಲೆಯಲ್ಲ ಸಬಲೆ ಎಂದು ಸರ್ಕಾರಿ ಅಭಿಯೋಜಕಿ ಮೀನಾಕ್ಷಿ ತಿಳಿಸಿದರು. ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಅಡವಿಹಳ್ಳಿ ಗ್ರಾಪಂ ಸಹಯೋಗದೊಂದಿಗೆ ತಾಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ಹಾಗೂ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಇಂದು ಮಹಿಳೆಯರಿಗೆ ವಿಶೇಷ ಸವಲತ್ತು ನೀಡುತ್ತಿದ್ದು ಅದರ ಸದುಪಯೋಗವನ್ನು ಪಡೆದುಕೊಂಡು ಪ್ರತಿಯೊಬ್ಬರೂ ಮುಖ್ಯವಾಹಿನಿಗೆ ಬರಬೇಕು. ಹಲವು ದಶಕಗಳ ಹಿಂದೆ ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದಳು, ಆದರೆ ಕಾಲ ಬದಲಾದಂತೆ ಶೈಕ್ಷಣಿಕ ಪ್ರಜ್ಞೆ ಎಲ್ಲರಲ್ಲೂ ಮೂಡತೊಡಗಿದೆ. ಹಾಗಾಗಿ ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದಾಳೆ ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ ವೆಂಕಟೇಶ ಮಾತನಾಡಿ, ಭಾರತವು ಸಾವಿರಾರು ವರ್ಷಗಳಿಂದ ಹೆಣ್ಣಿಗೆ ವಿಶೇಷ ಗೌರವ ನೀಡುತ್ತಾ ಬಂದಿದೆ. ಯಾವ ದೇಶದಲ್ಲಿ ಹೆಣ್ಣಿಗೆ ಗೌರವವಿದೆಯೋ ಆ ದೇಶವು ಸುಲಭವಾಗಿ ಅಭಿವೃದ್ಧಿ ಹೊಂದುತ್ತದೆ ಎಂದರು.

ಹಿರಿಯ ವಕೀಲ ಕಣಿವಿಹಳ್ಳಿ ಮಂಜುನಾಥ ಮಾತನಾಡಿ, ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಮಾರ್ಚ್‌ನಲ್ಲಿ ಮಹಿಳಾ ದಿನ ಆಚರಿಸಲಾಗುತ್ತದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಗುರುತಿಸುವುದು ಮತ್ತು ಮಹಿಳಾ ಸಮಾನತೆ, ಲಿಂಗ ತಾರತಮ್ಯ ಕುರಿತು ಅರಿವು ಮೂಡಿಸುವುದು ನಮ್ಮ ನಿಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net