

ಅರಕಲಗೂಡು: ಅಂಬೇಡ್ಕರ್ ಅವರ ಸಂವಿಧಾನವನ್ನು ಪರಿಪೂರ್ಣವಾಗಿ ಜಾರಿಗೊಳಿಸಿದ್ದರೆ ದೇಶದಲ್ಲಿ ತಾಂಡವಾಡುತ್ತಿರುವ ಬಡತನ, ಹಸಿವು, ನಿರುದ್ಯೋಗ, ಸಾಮಾಜಿಕ ಅಸಮಾನತೆ ತೊಲಗಿ ಏಳಿಗೆ ಕಾಣಬಹುದಿತ್ತು ಎಂದು ಎಸ್‌ಸಿ, ಎಸ್‌ಟಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ದೇವರಾಜ ಅರಸು ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಕೃಷ್ಣಪ್ಪ ಬಣ) ತಾಲೂಕು ಘಟಕ ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ದಿವಂಗತ ದಲಿತ ಚಳವಳಿಯ ಹೋರಾಟಗಾರರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್ ಅವರ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಿಂತನೆಗಳನ್ನು ದೇಶ ಸ್ವಾತಂತ್ರ್ಯ ಬಂದ ಪ್ರಾರಂಭದಲ್ಲೆ ಅಳವಡಿಸಿಕೊಂಡಿದ್ದರೆ ದೇಶ ಇನ್ನಷ್ಟು ಶಕ್ತಿಶಾಲಿಯಾದ ರಾಷ್ಟ್ರವಾಗಿರುತ್ತಿತ್ತು. ನಿರ್ಲಕ್ಷೃ ತೋರಿದ ಕಾರಣ ಹಸಿವು, ಬಡತನ, ಅನಕ್ಷರತೆ, ಜಾತಿ ಪದ್ಧತಿ, ಅಸ್ಪೃಶ್ಯತೆಯಂತಹ ಅನಿಷ್ಠ ಪದ್ಧತಿಗಳು ಇನ್ನೂ ಮುಂದುವರೆದಿದೆ ಎಂದರು.
ದಸಂಸ ಹಿರಿಯ ಮುಖಂಡ ಎಚ್.ಕೆ.ಸಂದೇಶ್ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನ ಇಲ್ಲದಿದ್ದರೆ ಜೈನ ಸಮುದಾಯಕ್ಕೆ ಸೇರಿದ ಅಮಿತ್ ಷಾ ಗೃಹಸಚಿವರಾಗಲು ಸಾಧ್ಯವೇ ಇರುತ್ತಿರಲಿಲ್ಲ. ನಿಮ್ಮ ಒಂದು ಮಾತಿನಿಂದ ದೇಶ ಇಂದು ಹೊತ್ತಿ ಉರಿಯುತ್ತಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಕೆಳಗಿಳಿಯಬೇಕೆಂಬುದು ಅಂಬೇಡ್ಕರ್ ಪರಿನಿರ್ವಾಣ ದಿನದ ಸಂದರ್ಭದಲ್ಲಿ ನಮ್ಮ ಹಕ್ಕೊತ್ತಾಯ ಎಂದರು.
ದಲಿತರು, ತುಳಿತಕ್ಕೊಳಗಾದವರ ಪರ ಹೋರಾಟಕ್ಕೆ ತಮ್ಮ ಬದುಕನ್ನೇ ಮೀಸಲಿಟ್ಟ ಅಂಬೇಡ್ಕರ್ ಮಹಾನ್ ಮಾನವತಾವಾದಿ. ದೇಶ ಸ್ವಾತಂತ್ಯ ಗಳಿಸಿ 75 ವರ್ಷ ಕಳೆದರೂ ಇನ್ನೂ ಅಸ್ಪೃಶ್ಯತೆ, ಜಾತಿ ಪದ್ಧತಿ, ದಲಿತರ ಮೇಲಿನ ದೌರ್ಜನ್ಯ ನಿಂತಿಲ್ಲ. ಇವರು ಅಂದು ಹೋರಾಟ ನಡೆಸದಿದ್ದರೆ ಇಂದು ದಲಿತ ವರ್ಗಗಳ ಬದುಕನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರುತ್ತಿರಲಿಲ್ಲ. ತಮ್ಮ ಬದುಕನ್ನು ಸಮಾಜದ ಏಳಿಗೆಗಾಗಿ ಮುಡುಪಿಟ್ಟ ಅವರ ಚಿಂತನೆಗಳನ್ನು ನಮ್ಮ ಯುವಜನರು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ದಲಿತ ಚಳುವಳಿಗೆ ನೀರೆರೆದು ಪೋಷಿಸಿದ ಮಹನೀಯರನ್ನು ನೆನಪಿಸುವ ಕಾರ್ಯ ನಮ್ಮೆಲ್ಲರ ಕರ್ತವ್ಯ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಚಳವಳಿ ಮುನ್ನಡೆಸುವುದು ಅಗತ್ಯ ಎಂದರು.
ವಕೀಲ ಬಿ.ಸಿ.ರಾಜೇಶ್ ಮಾತನಾಡಿ, ತಾಲೂಕು ಮತ್ತು ಜಿಲ್ಲೆಯಲ್ಲಿ ದಲಿತ ಚಳವಳಿ ಕಟ್ಟಿದ ದಿವಂಗತ ಮುಖಂಡರಾದ ಎಚ್.ಎಸ್.ಹರೀಶ್, ಬಿ.ಪಿ.ಜಯರಾಮ್. ಟಿ.ವಿ.ಶಿವರಾಮಯ್ಯ, ಲೋಕನಾಥ್, ಸ್ವಾಮಣ್ಣ, ವೆಂಕಟೇಶ್, ಸುದರ್ಶನ್ ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಇವರನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು, ಈ ನಿಟ್ಟಿನಲ್ಲಿ ದಸಂಸ ಹಮ್ಮಿಕೊಂಡಿರುವ ಕಾರ್ಯ ಶ್ಲಾಘನೀಯ ಎಂದರು.
ದಲಿತ ಚಳವಳಿಯನ್ನು ಕಟ್ಟಿದ ದಿವಂಗತ ಹೋರಾಟಗಾರರ ಕುಟುಂಬದವರು, ಹಿರಿಯ ದಲಿತ ಮುಖಂಡರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಮತ್ತು ಪದವಿ ತರಗತಿಗಳಲ್ಲಿ ಹೆಚ್ಚು ಅಂಕ ಗಳಿಸಿದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕರಿಸಲಾಯಿತು.
ಯುವ ಮುಖಂಡ ಪುಟ್ಟಸ್ವಾಮಿ ಸಂವಿಧಾನ ಪೀಠಿಕೆ ಓದಿದರು. ದಸಂಸ ಸಂಚಾಲಕ ಪಿ.ಶಂಕರ್, ಜಿಲ್ಲಾ ಸಂಚಾಲಕ ವಿರೇಶ್, ಪಪಂ ಸದಸ್ಯ ಅನಿಕೇತನ್, ಸಮಾಜ ಸೇವಕ ಕಾಂತರಾಜು, ಮುಖಂಡರಾದ ಸಣ್ಣಸ್ವಾಮಿ, ಎಂ.ಎಸ್. ಸುರೇಶ್, ಈರಾಜ್, ಚಂದ್ರಣ್ಣ, ರಮೇಶ್ ಮರಿಲಕ್ಕಿ, ಮೋಕಲಿ ಪುಟ್ಟರಾಜ್, ಚನ್ನಕೇಶವ, ಮಂಜು, ಲಕ್ಷ್ಮಣ, ಮಹೇಶ್, ಮಂಜು, ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ, ತಾಲೂಕು ಕಚೇರಿ ಶಿರಸ್ತೆದಾರ್ ಸಿ.ಸ್ವಾಮಿ ಇದ್ದರು.