ಅಂಬೇಡ್ಕರ್ ಸೇವಾ ಕೇಂದ್ರದಿಂದ ಅನರ್ಹರ ಪತ್ತೆ

minister santhosh lad
ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್
Published on

ಶಿವಮೊಗ್ಗ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ನೋಂದಣಿ, ಫಲಾನುಭವಿಗಳ ಆಯ್ಕೆ, ನೈಜತೆ ಪರಿಶೀಲನೆ ಮತ್ತಿತರ ಕೆಲಸಗಳನ್ನು ನಿರ್ವಹಿಸಲು ಪ್ರತ್ಯೇಕವಾಗಿ ಅಂಬೇಡ್ಕರ್ ಸೇವಾ ಕೇಂದ್ರವನ್ನು ಅಸ್ತಿತ್ವಕ್ಕೆ ತಂದಿರುವುದು ಅನರ್ಹರನ್ನು ಪತ್ತೆಮಾಡಲು ನೆರವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.

ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡುವ ಜವಾಬ್ದಾರಿಯನ್ನೂ ಸೇವಾ ಕೇಂದ್ರಗಳಿಗೆ ವಹಿಸಲಾಗಿದೆ. ಸೇವಾ ಕೇಂದ್ರದ ಮೂಲಕ 58 ಲಕ್ಷ ಕಾರ್ಡ್ ಇದ್ದಿದ್ದನ್ನು 38 ಲಕ್ಷಕ್ಕೆ ಇಳಿಸಲಾಗಿದೆ. ಇಲಾಖೆಯಲ್ಲಿ 43 ಸೆಕ್ಟರ್‌ಗಳಿದ್ದು 43 ಹೈಟೆಕ್ ವಾಹನಗಳ ಮೂಲಕ ಕಟ್ಟಡ ಕಾಮಗಾರಿಗಳ ಸ್ಥಳಕ್ಕೆ ತೆರಳಿ ಸಕ್ರಿಯ ಕಾರ್ಮಿಕರು ಎಷ್ಟಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಕಟ್ಟಡ ಕಾರ್ಮಿಕರು ನೋಂದಣಿ ಆಗಿದ್ದಾರೋ ಇಲ್ಲವೋ ಎಂಬುದನ್ನು ಪರೀಶಿಲಿಸಿ ಸ್ಥಳದಲ್ಲೇ ನೋಂದಣಿ ಮಾಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರ ಸಂಖ್ಯೆ ಹೆಚ್ಚಾಗಲು ಮತ್ತು ಅನರ್ಹರು ಸೇರ್ಪಡೆಯಾಗಲು ಎಲ್ಲರ ಪಾತ್ರವೂ ಇದೆ. ಕೇವಲ ಅಧಿಕಾರಿಗಳನ್ನೇ ಹೊಣೆ ಮಾಡುವುದಿಲ್ಲ. ಹಾಗಾಗಿ ಮುಂಬರುವ ಆರು ತಿಂಗಳಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಮತ್ತಷ್ಟು ಪಾರದರ್ಶಕತೆ ತರಲಾಗುವುದು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಮುಖಂಡರಾದ ಎಚ್.ಸಿ.ಯೋಗೇಶ್, ಶಿವಕುಮಾರ್, ಕಲೀಂ ಉಲ್ಲಾ, ಕಲೀಂ ಪಾಷಾ, ಕಲಗೋಡು ರತ್ನಾಕರ್, ಇಸ್ಮಾಯಿಲ್ ಖಾನ್, ಎನ್.ರಮೇಶ್, ಎಚ್.ಸಿ.ಚಂದ್ರಭೂಪಾಲ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net