ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಹಚ್ಚಿ

05Jaggu5
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿದರು. ವಾಸವಿ ರೆಡ್ಡಿ ಜೊಸ್ನಾ, ಅನಿತಾ ಲಕ್ಷ್ಮೀ ಇತರರಿದ್ದರು.
Published on

ಬೆಳಗಾವಿ: ಬಡ ಜನರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಬೇಕು. ಪಡಿತರ ಚೀಟಿ ಪರಿಷ್ಕರಣೆಗೆ ಹೊರಡಿಸಲಾಗಿರುವ ಮಾರ್ಗಸೂಚಿಗಳ ಪ್ರಕಾರ ಪಡಿತರ ಚೀಟಿ ಪರಿಷ್ಕರಣೆಗೆ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಆಹಾರ ಇಲಾಖಾ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು. ಪಡಿತರ ಚೀಟಿ ಪರಿಷ್ಕರಣೆ ವೇಳೆ ಅರ್ಹರಿಗೆ ತೊಂದರೆ ಆಗದಂತೆ ನಿಗಾವಹಿಸುವುದರ ಜತೆಗೆ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಹಚ್ಚಲು ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ನಿಯಮಿತವಾಗಿ ಗೋದಾಮು ಪರಿಶೀಲಿಸಿ: ಗೋದಾಮುಗಳನ್ನು ನಿಯಮಿತವಾಗಿ ಪರಿಶೀಲಿಸಿ ಅವಶ್ಯಕತೆಗಿಂತ ಹೆಚ್ಚಿನ ಆಹಾರ ಧಾನ್ಯ ಸಂಗ್ರಹವಾಗದಂತೆ ನಿಗಾವಹಿಸಬೇಕು. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಶೀಘ್ರ ಜಾಗೃತ ಸಮಿತಿ ರಚಿಸಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಜತೆ ನಿರಂತರ ಸಮನ್ವಯ ಸಾಧಿಸಬೇಕು. ಎಲ್ಲ ಗ್ಯಾಸ್ ಏಜೆನ್ಸಿಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಸಾಧನಗಳಲ್ಲಿ ರೈತರಿಗೆ ಮೋಸ ಆಗದಂತೆ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಮಾರ್ಗಸೂಚಿಗಳನ್ವಯ ತೂಕದ ಸಾಧನ ಅಳವಡಿಸಿರುವ ಕುರಿತು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಹೊಸ ನ್ಯಾಯಬೆಲೆ ಅಂಗಡಿಗೆ ಪ್ರಸ್ತಾವನೆ:ಆಹಾರ ಇಲಾಖೆ ಆಯುಕ್ತ ವಾಸವಿ ರೆಡ್ಡಿ ಜೊಸ್ನಾ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಬೆಳಗಾವಿ ವಿಭಾಗಕ್ಕೆ ಸೆಪ್ಟೆಂಬರ್ ಅಂತ್ಯದವರೆಗೆ 2759.02 ಕೋಟಿ ರೂ. ಡಿಬಿಟಿ ಮೂಲಕ ಸಂದಾಯ ಮಾಡಲಾಗಿರುತ್ತದೆ. ಬೆಳಗಾವಿ ಕಂದಾಯ ವಿಭಾಗದಲ್ಲಿ 5,231 ನ್ಯಾಯಬೆಲೆ ಅಂಗಡಿಗಳಿದ್ದು, ಹೊಸ ಪಡಿತರ ಅಂಗಡಿ ತೆರೆಯಲು ಇರುವಂತಹ ಮಾರ್ಗಸೂಚಿಗಳನ್ವಯ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.

12.15 ಕೋಟಿ ರೂ.ರಾಜಸ್ವ ಸಂಗ್ರಹ: ಕಾನೂನು ಮಾಪನ ಇಲಾಖೆ ನಿಯಂತ್ರಕಿ ಅನಿತಾ ಲಕ್ಷ್ಮೀ ಮಾತನಾಡಿ, ಬೆಳಗಾವಿ ಕಂದಾಯ ವಿಭಾಗದಲ್ಲಿ ಜನವರಿ ಅಂತ್ಯದವರೆಗೆ 12.15 ಕೋಟಿ ರೂ.ರಾಜಸ್ವ ಸಂಗ್ರಹ ಮಾಡಲಾಗಿದೆ. ಒಟ್ಟು 11,418 ತಪಾಸಣೆ ನಡೆಸಿ 2,218 ಮೊಕದ್ದಮೆ ಹೂಡಿ 73.88 ಲಕ್ಷ ರೂ.ಅಭಿಸಂಧಾನ ದಂಡ ವಿಧಿಸಲಾಗಿದೆ. ಬೆಳಗಾವಿ ಕಂದಾಯ ವಿಭಾಗದಲ್ಲಿ ಪ್ರಸಕ್ತ ವರ್ಷದಲ್ಲಿ 1821 ಪೆಟ್ರೋಲ್ ಪಂಪ್ ತಪಾಸಣೆ ಮಾಡಿದ್ದು, ಈ ಪೈಕಿ 225 ಮೊಕದ್ದಮೆ ಹೂಡಿ 5,55,00 ರೂ.ಗಳ ಅಭಿಸಂದಾನ ಶುಲ್ಕ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಥರ್ಮಲ್ ಪ್ರಿಂಟರ್ ಅಳವಡಿಸಿ: ಬೆಳಗಾವಿ ಕಂದಾಯ ವಿಭಾಗದಲ್ಲಿ ಅಂದಾಜು 13 ಲಕ್ಷ ಫಲಾನುಭವಿಗಳು ಇ-ಕೆವೈಸಿ ನೀಡದೆ ಪಡಿತರ ಪಡೆದಿಲ್ಲ. ಅಂತಹ ಫಲಾನುಭವಿಗಳನ್ನು ಗುರುತಿಸಿ ಅವರ ವಿವರಗಳನ್ನು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಚುರಪಡಿಸಿ ವರದಿ ನೀಡಬೇಕು. ಫೆ.20ರೊಳಗಾಗಿ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಥರ್ಮಲ್ ಪ್ರಿಂಟರ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಕೆ.ಎಚ್.ಮುನಿಯಪ್ಪ ತಿಳಿಸಿದರು. ಸಚಿವರ ವಿಶೇಷ ಕರ್ತವ್ಯಾಧಿಕಾರಿ ವೆಂಕಟೇಶ, ಆಪ್ತ ರ್ಕಾರ್ಯದರ್ಶಿ ನಟರಾಜ, ಆಹಾರ ಇಲಾಖೆ ಆಯ್.ಟಿ.ವಿಭಾಗದ ಮುಖ್ಯಸ್ಥ ಎಂ.ವಿ.ಚಂದ್ರಕಾಂತ, ಆಹಾರ ಇಲಾಖೆ ಆಯುಕ್ತರ ಕಚೇರಿ ಜಂಟಿ ನಿರ್ದೆಶಕ ಎಂ.ಎಸ್.ಬಾಬು, ಕಾನೂನು ಮಾಪನ ಶಾಸ್ತ್ರ ಇಲಾಖೆ ಜಂಟಿ ನಿಯಂತ್ರಕ ಎಸ್.ಆರ್.ಮಾಳಿ ಇತರರಿದ್ದರು.

ಜಿಪಿಎಸ್ ಅಳವಡಿಕೆ ಕಡ್ಡಾಯ

ಆಹಾರ ಧಾನ್ಯ ಸರಬರಾಜು ಮಾಡುವ ಲಾರಿಗಳಿಗೆ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಿದೆ. ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ಖರೀದಿ ಕೇಂದ್ರಗಳಲ್ಲಿ ನಿಯಮಾನುಸಾರ ಆಹಾರ ಧಾನ್ಯ ಖರೀದಿಸುತ್ತಿರುವ ಕುರಿತು ಪರಿಶೀಲಿಸಬೇಕು. ಸರ್ಕಾರ ನಿಗದಿಪಡಿಸಿದ ದರದಂತೆ ಬೆಂಬಲ ಬೆಲೆಯಡಿ ಖರೀದಿಸಬೇಕು. ಯಾವುದೇ ಅವ್ಯವಹಾರ ನಡೆಯದಂತೆ ನಿಗಾವಹಿಸಲು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net