ಅನರ್ಹರ ಅರ್ಜಿಗಳಿಗೂ ಮಾಸಾಶನ ಮಂಜೂರು

dvd Tasildar
ವೆಂಕಟೇಶ್
Published on

ದೇವದುರ್ಗ: ಕರ್ತವ್ಯ ಲೋಪ, ಸರ್ಕಾರದ ಅನುದಾನ ಸೋರಿಕೆ, ಅಧಿಕಾರ ದುರ್ಬಳಕೆ ಆರೋಪದ ಮೇಲೆ ಗ್ರೇಡ್ 2 ತಹಸೀಲ್ದಾರ್ ಆರ್.ವೆಂಕಟೇಶ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ರಾಘವೇಂದ್ರ ಆದೇಶಿಸಿದ್ದಾರೆ.

2024-25ನೇ ಸಾಲಿನಲ್ಲಿ ತಾಲೂಕಿನಲ್ಲಿ ವಿವಿಧ ಪಿಂಚಣಿ ಯೋಜನೆಯಡಿ ಅತಿ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿ ಅವರು, ರಾಯಚೂರು ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಿದ್ದರು.

ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ ಅಧಿಕಾರ ಅವಧಿಯ 2024ರ ಜನವರಿಯಿಂದ ಡಿಸೆಂಬರ್‌ವರೆಗೆ ವಿವಿಧ ಮಾಸಾಶನ ಅರ್ಜಿ ವಿಲೇವಾರಿ ಪಟ್ಟಿಯನ್ನು ಪರಿಶೀಲಿಸಿದ್ದು ದೇವದುರ್ಗ ಹೋಬಳಿಯಲ್ಲಿ 12526 ಅರ್ಜಿಗಳು ವಿಲೇವಾರಿ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಸಂಧ್ಯಾ ಸುರಕ್ಷಾ ಯೋಜನೆಗೆ ಸಂಬಂಧಿಸಿದಂತೆ 8279, ವೃದ್ಧಾಪ್ಯ ಯೋಜನೆಯಡಿ 3478 ಅನರ್ಹ ಅರ್ಜಿಗಳನ್ನು ಮಂಜೂರು ಮಾಡಿ ಸರ್ಕಾರಕ್ಕೆ ಸುಮಾರು ನಾಲ್ಕು ಕೋಟಿ ರೂ. ನಷ್ಟ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ಉಪವಿಭಾಗಾಧಿಕಾರಿ ಉಲ್ಲೇಖಿಸಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ತಿರಸ್ಕರಿಸಿದ ಅನರ್ಹ ಫಲಾನುಭವಿಗಳ ಅರ್ಜಿಗಳಿಗೂ ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ್ ಮಾಸಾಶನ ನೀಡಿದ್ದಾರೆ. ತನಿಖೆಗೆ ಒಳಪಡಿಸಿದ 12 ತಿಂಗಳಲ್ಲಿ ನಾಲ್ಕು ಕೋಟಿ ರೂ. ನಷ್ಟ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಕರ್ನಾಟಕ ನಾಗರಿಕ ಸೇವಾ ನಿಯಮ 1957 ನಿಯಮ 10/1 (ಡಿ) ಅನ್ವಯ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net