ಕೈಗಾರಿಕೆಗಳ ಧೂಳು ನಿಯಂತ್ರಿಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ ಕುಡತಿನಿ ಹಾಗೂ ಸುತ್ತಲಿನ ಜನತೆಯ ಎಚ್ಚರ

021220 Kudatini Villagers Protest on Industry Dust
ಕುಡತಿನಿಯಲ್ಲಿ ಕೈಗಾರಿಕೆ ಪ್ರದೇಶದ ಮಾರ್ಗಮಧ್ಯೆ ಪ್ರತಿಭಟನಾಕಾರರನ್ನು ಪೊಲೀಸರು ತಡೆದ ಸಂದರ್ಭ ರಸ್ತೆಯಲ್ಲಿಯೇ ಕೈಗಾರಿಕೆಗಳ ವಿರುದ್ಧ ಘೋಷಣೆ ಕೂಗಿದರು.
Published on

ಕುರುಗೋಡು: ಕೈಗಾರಿಕೆಗಳಿಂದ ಹೊಮ್ಮುವ ಕಪ್ಪು ಧೂಳಿನ ನಿಯಂತ್ರಣಕ್ಕೆ ಒತ್ತಾಯಿಸಿ ಕುಡತಿನಿ ಪಟ್ಟಣದ ಜನತೆ ಬುಧವಾರ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದರು.

ಶ್ರೀ ದೊಡ್ಡ ಆಂಜನೇಯ ದೇವಸ್ಥಾನದಿಂದ ಹೊರಟ ರ‌್ಯಾಲಿಯು ಕೈಗಾರಿಕಾ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುವ ಮುನ್ನ ಮಾರ್ಗ ಮಧ್ಯೆ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ತಡೆದರು. ಈ ಸಂದರ್ಭ ಮಾತಿನ ಚಕಮಕಿ ನಡೆಯಿತು.

ವಿಪರೀತ ಧೂಳಿನಿಂದ ಪಟ್ಟಣ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ವಾಸಿಸುವ ಕುಟುಂಬಗಳ ಆರೋಗ್ಯ ಹದಗೆಡುತ್ತ್ತಿದೆ. ಕಾರ್ಖಾನೆಗಳ ವಿಷ ಅನಿಲ ಹಾಗೂ ದಟ್ಟಣೆಯ ಕಪ್ಪು ಧೂಳು ಕೂಡಲೇ ಸ್ಥಗಿತಗೊಳಿಸಬೇಕು ಹಾಗೂ ಕೈಗಾರಿಕೆಗಳ ನಿಯಮದ ಪ್ರಕಾರ ಇಎಸ್‌ಪಿ ಮಿಷನ್ ಅಳವಡಿಸಿ ಧೂಳು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಕೈಗಾರಿಕೆಗಳ ಮುಂದೆ ಧರಣಿ ನಡೆಸಿ ಬಂದ್ ಮಾಡಿಸಲಾಗುವುದು ಎಂದು ರೆಯಾನ್, ಅಗರ್‌ವಾಲ್, ಹೋತೂರ್, ಸ್ಕ್ಯಾನ್, ಶಾತವಾಹನ, ಪವನ್, ಎಸಿಸಿ ಹಾಗೂ ಬಿಟಿಪಿಎಸ್ ಕೈಗಾರಿಕೆಗಳ ವ್ಯವಸ್ಥಾಪಕರಿಗೆ ಪ್ರತಿಭಟನಾಕಾರರು ಎಚ್ಚರಿಸಿದರು.

ಸ್ಕ್ಯಾನ್ ಸ್ಟೀಲ್ ಕೈಗಾರಿಕೆ ವ್ಯವಸ್ಥಾಪಕ ಸುಭಾಷ್, ನಮ್ಮ ಕೈಗಾರಿಕೆಗಳಲ್ಲಿ ಆಗುತ್ತಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಳ್ಳಲು 30 ದಿನಗಳ ಕಾಲವಕಾಶ ನೀಡಬೇಕೆಂದು ಪ್ರತಿಭಟನಾಗಾರರಿಗೆ ವಿನಂತಿಸಿದರು.

ಇದಕ್ಕೂ ಮುನ್ನ ಶ್ರೀ ದೊಡ್ಡ ಆಂಜನೇಯ ದೇವಸ್ಥಾನ ಬಳಿ ಪ್ರತಿಭಟನಾ ರ‌್ಯಾಲಿಗೆ ಚಾಲನೆ ನೀಡಿದ ಕುಡತಿನಿ ಪಪಂ ಅಧ್ಯಕ್ಷ ವಿ.ರಾಜಶೇಖರ್, ಕೈಗಾರಿಕೆಗಳಿಂದ ಹೊಮ್ಮುವ ಕಪ್ಪು ಧೂಳು ಅಸ್ತಮಾ, ಕ್ಯಾನ್ಸರ್, ಕೆಮ್ಮು ನೆಗಡಿ ಕಾಯಿಲೆಗಳಿಗೆ ಕಾರಣವಾಗುತ್ತಿದ್ದು, ಆರೋಗ್ಯಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ ಎಂದರು.

ಮುಖಂಡರಾದ ಪಲ್ಲೇದ್ ಪಂಪಾಪತಿ, ಚಂದ್ರಾಯಿ ದೊಡ್ಡಬಸಪ್ಪ, ಪಲ್ಲೇದ್ ಪ್ರಭು, ಬಿಕ್ಕಿ ಶ್ರೀನಿವಾಸ್, ವಿಸಿಕೆ ಚಂದ್ರಪ್ಪ, ಆರ್.ಸತ್ಯಪ್ಪ, ದೊಡ್ಡಪ್ಪ, ಭೀಷಣ್ಣ, ಜಂಗ್ಲಿಸಾಬ್, ಗೋಪಾಲ್, ಐ.ಲೋಕೇಶ್, ಪಪಂ ಸದಸ್ಯರಾದ ವೆಂಕಟರಮಣ ಬಾಬು, ರಾಮಲಿಂಗಪ್ಪ, ಲೆನಿನ್, ಕನ್ನಕೇರಿ ಪಂಪಾಪತಿ ಹಾಗೂ ಕನ್ನಡ ಹಾಗೂ ಪ್ರಗತಿಪರ ಸಂಘಟನೆಗಳು ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net