

ವೇಮಗಲ್: ಪ್ರಮುಖ ಕೈಗಾರಿಕಾ ಪ್ರದೇಶಗಳನ್ನು ಒಳಗೊಂಡಿರುವ ನರಸಾಪುರ, ವೇಮಗಲ್ ಹಾಗೂ ಕುರಗಲ್ ಭಾಗವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಪೂರಕವಾಗಿ ಸರ್ಕಾರವೂ ಈ ಭಾಗದ ಗ್ರಾಮಗಳನ್ನು ಒಳಗೊಂಡಂತೆ ಯೋಜನಾ ಪ್ರದೇಶ ಎಂದು ಘೋಷಿಸಿದೆ.
ಕೋಲಾರ ತಾಲೂಕು ವೇಮಗಲ್&ಕುರಗಲ್ ಪಟ್ಟಣ ಪಂಚಾಯಿತಿ ಮತ್ತು ನರಸಾಪುರ ಸುತ್ತಮುತ್ತಲಿನ ಗ್ರಾಮಗಳನ್ನು ಒಳಗೊಂಡಂತೆ ಯೋಜನಾ ಪ್ರದೇಶ ಎಂದು ಸರ್ಕಾರ ಆದೇಶಿಸಿ ಈ ಭಾಗದ ಜನತೆಗೆ ಸಿಹಿ ಸುದ್ದಿ ನೀಡಿದೆ.
ತಾಲೂಕು ವ್ಯಾಪ್ತಿಯಲ್ಲಿ ಅತಿ ದೊಡ್ಡ ಹೋಬಳಿಯಾಗಿದ್ದ ವೇಮಗಲ್ ಅನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲು ಒತ್ತಾಯ ಇತ್ತು. ಆದರೆ ಅಂದಿನ ಸರ್ಕಾರವು ವೇಮಗಲ್ ಜತೆಗೆ ಕುರಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳನ್ನು ಸೇರಿಸಿ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿತ್ತು. ಈಗ ವೇಮಗಲ್&ಕುರಗಲ್ ಪಟ್ಟಣ ಪಂಚಾಯಿತಿ ಜತೆಗೆ ನರಸಾಪುರ ಸ್ಥಳಿಯ ಯೋಜನಾ ಪ್ರದೇಶ ಎಂದು ಘೋಷಣೆ ಮಾಡಿದೆ. ನರಸಾಪುರ, ವೇಮಗಲ್ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿ, ಲಾಂತರ ಮಂದಿಗೆ ಉದ್ಯೋಗ ಕಲ್ಪಿಸಿವೆ. ಅದೇ ರೀತಿ ವೇಮಗಲ್ ಪಟ್ಟಣ ಪಂಚಾಯಿತಿ ತಾಲೂಕು ಕೇಂದ್ರಗಳನ್ನು ನಾಚಿಸುವ ರೀತಿಯಲ್ಲಿ ವರ್ಷದಿಂದ ವರ್ಷಕ್ಕೆ ಭೌಗೋಳಿಕ ವ್ಯಾಪ್ತಿ ಹಿಗ್ಗಿಸಿಕೊಳ್ಳುತ್ತಿದೆ.
ಸರ್ಕಾರಿ ಶಾಲಾ&ಕಾಲೇಜುಗಳು, ನಾಡಕಚೇರಿ, ರೈತ ಸಂಪರ್ಕ ಕೇಂದ್ರ, ಪ್ರಮುಖ ಧಾರ್ಮಿಕ ಕೇಂದ್ರ ಸೀತಿ, ದೇವಾಲಯಗಳು, ತಾಲೂಕುಮಟ್ಟದ ಆಟದ ಮೈದಾನ ಹೀಗೆ ಹಲವು ಸಾರ್ವಜನಿಕ ಸಂಸ್ಥೆಗಳ್ನು ಒಳಗೊಂಡಿದೆ. ಕೈಗಾರಿಕೆಗಳು ತಲೆ ಎತ್ತಿರುವ ಹಿನ್ನೆಲೆಯಲ್ಲಿ ಕೃಷಿ ಜಮೀನುಗಳೆಲ್ಲ ವಾಣಿಜ್ಯ ಉದ್ದೇಶಕ್ಕಾಗಿ ಪರಿವರ್ತನೆಯಾಗುತ್ತಿವೆ. ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ಭೌಗೋಳಿಕ ವ್ಯಾಪ್ತಿ ಹೆಚ್ಚಾಗುತ್ತಿದೆ.
ವೇಮಗಲ್, ಕುರಗಲ್ ಪಟ್ಟಣ ಪಂಚಾಯಿತಿ ಮತ್ತು ನರಸಾಪುರ ಸುತ್ತಮುತ್ತಲಿನ ಒಟ್ಟು 112 ಗ್ರಾಮಗಳನ್ನು ಸೇರಿಸಲಾಗಿದ್ದು, 23,828.2 ಹೆಕ್ಟೇರ್ ಪ್ರದೇಶ ವಿಸ್ತೀರ್ಣ ಯೋಜನಾ ಪ್ರದೇಶಕ್ಕೆ ಒಳಪಟ್ಟಿದ್ದು, ಈಗಾಗಲೇ ಗಡಿ ಗುರುತಿಸಲಾಗಿದೆ. ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ಗರಿಗೆದರಲಿವೆ.
ಒಂದು ವಾರದಲ್ಲಿ ಕಚೇರಿ ತೆರೆಯುವ ಸಾಧ್ಯತೆ ಯೋಜನಾ ಪ್ರದೇಶದ ಮಹಾಯೋಜನೆ ಸಿದ್ಧಪಡಿಸುವವರೆಗೂ, ಸ್ಥಳಿಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಈಗಾಗಲೇ ಚಾಲ್ತಿಯಲ್ಲಿರುವ ಕೋಲಾರ ಸ್ಥಳಿಯ ಯೋಜನಾ ಪ್ರದೇಶದ ಮಹಾಯೋಜನೆಯ ವಲಯ ನಿಯಮ ಅಳವಡಿಸಿಕೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಲತಾ ಆದೇಶಿಸಿದ್ದಾರೆ. ಒಂದು ವಾರದಲ್ಲಿ ವೇಮಗಲ್ ಪಟ್ಟಣದಲ್ಲಿ ಪ್ರಾಧಿಕಾರದ ಕಚೇರಿ ತೆರೆಯುವ ಸಾಧ್ಯತೆಯಿದೆ. ಪ್ರತ್ಯೇಕ ಪ್ರಾಧಿಕಾರ ರಚನೆ ವೇಮಗಲ್, ನರಸಾಪುರ ಪಟ್ಟಣಕ್ಕೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚನೆ ಮಾಡಲಾಗಿದ್ದು, ಇದನ್ನು ಮುನ್ನಡೆಸಿಕೊಂಡು ಹೋಗಲು ಅಧ್ಯಕ್ಷರನ್ನು ಸರ್ಕಾರ ನೇಮಿಸಲಿದೆ. ಸದಸ್ಯ ಕಾರ್ಯದರ್ಶಿಯಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕ, ಮೂವರು ಇತರ ಸದಸ್ಯರನ್ನು ಸರ್ಕಾರವೇ ನೇಮಿಸಲಿದೆ. ಪ್ರದೇಶಾಭಿವೃದ್ಧಿಗೆ ಪೂರಕ ಈ ಭಾಗವನ್ನು ಯೋಜನಾ ಬದ್ಧವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್, ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಹಾಗೂ ಸ್ಥಳಿಯ ಮುಖಂಡರು ಸರ್ಕಾರದ ಮೇಲೆ ಒತ್ತಡ ತಂದು ಯೋಜನಾ ಪ್ರಾಧಿಕಾರ ಘೋಷಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮ ಪಂಚಾಯಿತಿಗಳಾಗಿದ್ದಾಗ ಸ್ಥಳಿಯ ಅಭಿವೃದ್ಧಿಯಾಗಬೇಕಾಗುವುದರ ಬಗ್ಗೆ ಗಮನ ಹರಿಸುವುದಿಲ್ಲ. ಇದಕ್ಕೆ ಪೂರಕವಾದ ತಾಂತ್ರಿಕ ಅಧಿಕಾರಿಗಳು ಸಹ ಇರುವುದರಿಲ್ಲ. ಪ್ರದೇಶ ಅಭಿವೃದ್ಧಿಯು ಮುಂದಿನ 20 ವರ್ಷಗಳಿಗೆ ತಕ್ಕಂತೆ ಹೇಗೆ ಆಗಬೇಕು ಎಂಬುರ ಬಗ್ಗೆ ಕ್ರಿಯಾಯೋಜನೆ ತಯಾರಿಸುವವರು ಪ್ರಾಧಿಕಾರದಲ್ಲಿ ಇರಲಿದ್ದು, ಇದು ಉತ್ತಮ ಬೆಳೆವಣಿಕೆಯಾಗಿದೆ ಎಂದು ಎಂಎಲ್ಸಿ ಅನಿಲ್ಕುಮಾರ್ ತಿಳಿಸಿದರು.
ಕ್ರಮಬದ್ಧವಾದ ಬೆಳವಣಿಗೆ ದೃಷ್ಟಿಯಿಂದ ಯೋಜನಾ ಪ್ರದೇಶವನ್ನು ಸರ್ಕಾರ ಘೋಷಣೆ ಮಾಡಿದೆ. ಕೈಗಾರಿಕೆಗಳ ಪ್ರದೇಶವಾಗಿರುವುದರಿಂದ ಇದೊಂದು ಒಳ್ಳೆಯ ಪ್ರಯತ್ನವಾಗಿದೆ. ಸರ್ಕಾರ ಮಾಡಿರುವ ಪ್ರಯತ್ನವು ಸ್ವಾಗತರ್ಹ. > ವಿ.ಆರ್.ಸುದರ್ಶನ್ ಮಾಜಿ ಉಪ ಸಭಾಪತಿ, ವಿಧಾನ ಪರಿಷತ್ ಕೈಗಾರಿಕೆ ಪ್ರದೇಶದ ಸಮೀಪ ಇರುವ ಗ್ರಾಪಂಗಳು ಅಭಿವೃದ್ಧಿ ಹೊಂದುತ್ತಿದ್ದು, ಅದನ್ನು ಯೋಜನಾ ಬದ್ಧವಾಗಿ ಮಾಡಬೇಕಿದೆ. ಆದ್ದರಿಂದ ಮಾಸ್ಟರ್ ಪ್ಲ್ಯಾನ್ ಮಾಡುವ ಇಂಜಿನಿಯರ್ಗಳು ಪ್ರಾಧಿಕಾರದಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಯೋಜನಾ ಬದ್ಧವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸರ್ಕಾರ ಕ್ರಮವಹಿಸಿದೆ. > ಎಂ.ಎಲ್.ಅನಿಲ್ ಕುಮಾರ್ ವಿಧಾನ ಪರಿಷತ್ ಸದಸ್ಯ, ಕೋಲಾರ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದ್ದು, ಇನ್ನು ಮುಂದೆ ಸ್ಥಳಿಯವಾಗಿಯೇ ಸರ್ಕಾರಿ ಸೌಲಭ್ಯಗಳು ದೊರೆಯಲಿವೆ. > ವೆಂಕಟೇಶ್ ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ