

ತೀರ್ಥಹಳ್ಳಿ: ತಾಲೂಕಿನಲ್ಲಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಮತ್ತು ಯುವ ಉದ್ಯಮಿಗಳನ್ನು ಉತ್ತೇಜಿಸುವ ಸಲುವಾಗಿ ಕನಿಷ್ಠ 50 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಆರಗ ಜ್ಞಾನೇಂದ್ರ ಆಶ್ವಾಸನೆ ನೀಡಿದರು.
ಪಟ್ಟಣದ ವಿದ್ಯಾಧಿರಾಜ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ವರ್ತಕರ ಸೌಹಾರ್ದ ಸಹಕಾರಿ ಸಂಘ ಮತ್ತು ತಾಲೂಕು ವರ್ತಕರ ಸಂಘದ ಮಹಾಸಭೆಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ತಾಲೂಕಿನಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಹಲವು ವರ್ಷಗಳಿಂದ ಪ್ರಯತ್ನ ನಡೆದಿದೆ. ಆದರೆ ಸೂಕ್ತ ಸ್ಥಳಾವಕಾಶದ ಕೊರತೆಯಿಂದಾಗಿ ಈ ಬೇಡಿಕೆ ನನೆಗುದಿಗೆ ಬಿದ್ದಿದೆ. ಪ್ರಸ್ತುತ ಕೇಂದ್ರ ಸರ್ಕಾರವು ಕಂದಾಯ ಇಲಾಖೆಯ ಸೊಪ್ಪಿನ ಬೆಟ್ಟ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ನಿಟ್ಟಿನಲ್ಲಿ ತಾಲೂಕಿನ ಯುವ ಉದ್ಯಮಿಗಳ ಕೋರಿಕೆಯಂತೆ ಸೂಕ್ತ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದರು.
ಇಡೀ ರಾಜ್ಯದಲ್ಲಿ ಜನಸಂಖ್ಯೆ ಏರಿಕೆಯಾಗದ ಒಂದೇ ಪಟ್ಟಣ ತೀರ್ಥಹಳ್ಳಿ. ಸಾಮಾಜಿಕವಾಗಿ ಮುಂದುವರಿದಿರುವ ಈ ಪಟ್ಟಣದ ಚಿತ್ರಣವೇ ಈಚಿನ ವರ್ಷಗಳಲ್ಲಿ ಬದಲಾಗಿದೆ. ಹಿಂದಿನ ತಲೆಮಾರಿನ ವ್ಯಾಪಾರಿ ಕುಟುಂಬಗಳೇ ಕಣ್ಮರೆಯಾಗುತ್ತಿದ್ದು ಹೊಸಬರ ಪ್ರವೇಶವಾಗುತ್ತಿದೆ. ಮೇಲ್ದರ್ಜೆಗೆ ಏರಿರುವ ಸರ್ಕಾರಿ ಆಸ್ಪತ್ರೆ, ಶೀಘ್ರ ಉದ್ಘಾಟನೆಗೊಳ್ಳಲಿರುವ 13 ಕೋಟಿ ರೂ. ವೆಚ್ಚದ ತಾಲೂಕು ಪಂಚಾಯಿತಿ ಕಟ್ಟಡ ಸಂಕೀರ್ಣ, ಪೊಲೀಸ್ ಸ್ಟೇಷನ್ ಹಾಗೂ ವಸತಿ ಕಟ್ಟಡ, ತುಂಗಾ ಸೇತುವೆ ನಿರ್ಮಾಣ ಹೀಗೆ ಅಭಿವೃದ್ಧಿಯಲ್ಲೂ ಸಾಧನೆ ಮಾಡಲಾಗಿದೆ ಎಂದು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ ಅವರ ನೆರವಿನಿಂದ ಶಿವಮೊಗ್ಗ ಜಿಲ್ಲೆ ಸರ್ವಕಾಲಿಕ ದಾಖಲೆಯಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ವಿಮಾನ ನಿಲ್ದಾಣ, ನಿರೀಕ್ಷೆಗೂ ಮೀರಿದ ರೈಲ್ವೆ ಸಂಪರ್ಕ, ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆ, 42 ಕೋಟಿ ರೂ. ವೆಚ್ಚದ ಭಾರತೀಪುರ ಮೇಲ್ಸೇತುವೆ, ತುಂಗಾ ಸೇತುವೆಗಳ ನಿರ್ಮಾಣ ಹೀಗೆ ಜಿಲ್ಲೆ ಮತ್ತು ನಮ್ಮ ತಾಲೂಕಿನ ಚಿತ್ರಣವೇ ಈಚಿನ ವರ್ಷಗಳಲ್ಲಿ ಬದಲಾಗಿದೆ ಎಂದು ವಿವರಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಪ್ರತಿನಿಧಿ ಸಿರಿಬೈಲು ಧರ್ಮೇಶ್, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಹಿರಿಯ ವರ್ತಕರನ್ನು ಗೌರವಿಸಲಾಯಿತು. ಹಿರಿಯ ಷೇರುದಾರ ಕಲ್ಮನೆ ಕೇಶವಮೂರ್ತಿ ಮಹಾಸಭೆಗೆ ಚಾಲನೆ ನೀಡಿದರು. ವರ್ತಕರ ಸೌಹಾರ್ದ ಸಹಕಾರಿ ಅಧ್ಯಕ್ಷ ಡಾನ್ ರಾಮಣ್ಣ ಶೆಟ್ಟಿ, ಉಪಾಧ್ಯಕ್ಷ ರಾಘವೇಂದ್ರ ಮಲ್ಯ, ತಾಲೂಕು ವರ್ತಕರ ಸಂಘದ ಅಧ್ಯಕ್ಷ ಚೈತನ್ಯ ಜವಳಿ, ರೂಪಾ ಎಸ್. ರಾವ್ ಇತರರಿದ್ದರು.
ರಸ್ತೆಬದಿ ವ್ಯಾಪಾರಿಗಳು ತೆರವು ಅನಿವಾರ್ಯ: ರಾಷ್ಟ್ರೀಯ ಹೆದ್ದಾರಿ 169 ತೀರ್ಥಹಳ್ಳಿಯಿಂದ 60 ಕಿಮೀ ದೂರದ ಶಿವಮೊಗ್ಗವನ್ನು ಕೇಂದ್ರ ಸರ್ಕಾರದ ಷರತ್ತಿನಂತೆ ಕೇವಲ 45 ನಿಮಿಷದಲ್ಲಿ ತಲುಪುವಂತೆ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಲಿದೆ. ಪಟ್ಟಣದ ಕುವೆಂಪು ವೃತ್ತದಿಂದ ಮಂಡಗದ್ದೆ ಕ್ಯಾತರ ಕ್ಯಾಂಪ್‌ವರೆಗಿನ ಹೆದ್ದಾರಿ ನಿರ್ಮಾಣಕ್ಕೆ 500 ಕೋಟಿ ರೂ. ಅನುದಾನ ಮಂಜೂರಾಗಿದ್ದು ಇದರ ಪೂರ್ವಭಾವಿ ಕೆಲಸಗಳು ಈಗಾಗಲೇ ಪ್ರಾರಂಭಗೊಂಡಿದೆ. ಪಟ್ಟಣದ ಕುವೆಂಪು ವೃತ್ತದಿಂದ ಕುಶಾವತಿವರೆಗಿನ ಹೆದ್ದಾರಿ ಅಗಲೀಕರಣದಿಂದ ರಸ್ತೆಬದಿಯಲ್ಲಿ ಬದುಕು ಕಟ್ಟಕೊಂಡಿರುವ ವ್ಯಾಪಾರಸ್ಥರು ಸ್ಥಳ ತೆರವು ಮಾಡಬೇಕಾದ ಅನಿವಾರ್ಯತೆಯಿದೆ. ಇವರಲ್ಲಿ ಬಹುತೇಕರಿಗೆ ಜಾಗದ ಹಕ್ಕುಪತ್ರಗಳು ಇಲ್ಲ. ಆದರೆ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈ ಕುರಿತಂತೆ ಹೆದ್ದಾರಿ ಪ್ರಾಧಿಕಾರದೊಂದಿಗೆ ಚರ್ಚಿಸಲಾಗುವುದು ಎಂದು ವರ್ತಕರ ಸಂಘದ ಕೋರಿಕೆಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.