

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಕೈಗಾರಿಕಾ ನಿವೇಶನಗಳ ದರ ಏರಿಕೆ ಮಾಡಲಾಗಿದೆ. ಶಾಸಕ ಅರವಿಂದ ಬೆಲ್ಲದ ಅವರು ಮಾಹಿತಿ ಕೊರತೆಯಿಂದ ಕಾಂಗ್ರೆಸ್ ಸರ್ಕಾರ ಕೈಗಾರಿಕಾ ನಿವೇಶನಗಳ ದರ ಏರಿಕೆ ಮಾಡಿದೆ ಎನ್ನುವ ಮೂಲಕ ಜನರ ದಾರಿ ತಪ್ಪಿಸುತ್ತಿರುವುದು ಸರಿಯಲ್ಲ ಎಂದು ಶಾಸಕ, ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಾಸಕ ಬೆಲ್ಲದ ಅವರು ಈ ಭಾಗಕ್ಕೆ ಎಫ್ಎಂಸಿಜಿ ಕ್ಲಸ್ಟರ್ ಬಂದಿದೆ. ಆದರೆ, ಬಿಜೆಪಿ ಅವಧಿಯಲ್ಲಿ ಕೈಗಾರಿಕಾ ನಿವೇಶನಕ್ಕೆ ಪ್ರತಿ ಎಕರೆಗೆ 80ಲಕ್ಷ ರೂ. ನಿಗದಿ ಪಡಿಸಿದ್ದ ದರವನ್ನು ಕಾಂಗ್ರೆಸ್ ಆಡಳಿತದಲ್ಲಿ 1.45ಕೋಟಿ ರೂ. ಏರಿಕೆ ಮಾಡಿದ್ದಾರೆ. ಇದರಿಂದ ಕೈಗಾರಿಕೆಗೆ ಹಿನ್ನಡೆಯಾಗಿದೆ ಎಂದು ಆರೋಪಿಸಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ. ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ (2022ರ ನವೆಂಬರ್ 23ರಂದು) ಇಲ್ಲಿನ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದ ಎಫ್ಎಂಜಿಸಿ ನಿವೇಶನಕ್ಕೆ ಪ್ರತಿ ಎಕರೆಗೆ 1.39ಕೋಟಿ ರೂ.ನಿಗದಿ ಪಡಿಸಲಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗಾರಿಕಾ ಉತ್ತೇಜನ ಹಿತದೃಷ್ಟಿಯಿಂದ ವಿಶೇಷ ಕಾಳಜಿ ವಹಿಸಿ, 6ಸಾವಿರ ಎಕರೆಯಲ್ಲಿ ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ನಿರ್ವಣಕ್ಕೆ ಬಜೆಟ್ನಲ್ಲಿ ಘೊಷಣೆ ಮಾಡಿದ್ದಾರೆ. ಇದರಲ್ಲಿ 3ಸಾವಿರ ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲೇ ಕೈಗಾರಿಕೆಗಳ ಬೆಳವಣಿಗೆಯಾಗಿದ್ದು, ಎಂಬುದನ್ನು ಯಾರು ಮರೆಯುವಂತಿಲ್ಲ ಎಂದು ಹೇಳಿದ್ದಾರೆ.
ಕೆಐಎಡಿಬಿ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ 259.52 ಎಕರೆ ಭೂಮಿಯಲ್ಲಿ ಈಗಾಗಲೇ 139ಎಕರೆ ಹಂಚಿಕೆ ಮಾಡಲಾಗಿದೆ. ಮುಮ್ಮಿಗಟ್ಟಿ ಎರಡನೇ ಹಂತದಲ್ಲಿ ಈಗಾಗಲೇ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿದ್ದು, ಬೇಡಿಕೆಯಷ್ಟು ಭೂಮಿ ಲಭ್ಯವಿಲ್ಲ ಎನ್ನಲಾಗುತ್ತಿದೆ. ಇದರಿಂದ ನಮ್ಮ ಸರ್ಕಾರದ ಅವಧಿಯಲ್ಲಿ ಕೈಗಾರಿಕೆಗೂ ಆದ್ಯತೆ ನೀಡಲಾಗಿದೆ ಎಂದು ಶಾಸಕ ಅಬ್ಬಯ್ಯ ಸ್ಪಷ್ಟ ಪಡಿಸಿದ್ದಾರೆ.